ಬಂಟ್ವಾಳ: ಇಂದು ಮಕ್ಕಳಿಗೆ ಅಕ್ಷರಾಭ್ಯಾಸದ ಮಹತ್ವ ಮತ್ತು ಅದರ ಪ್ರಯೋಜನಗಳ ಅರಿವನ್ನು ಮೂಡಿಸುವುದು ಅಗತ್ಯವಾಗಿದ್ದು, ಬಾಲಕಾರ್ಮಿಕ ಪದ್ಧತಿ ಆಚರಿಸುವುದು ಕಂಡುಬಂದಲ್ಲಿ ಅವರ ಮನವೊಲಿಸಿ ಮುಖ್ಯವಾಹಿನಿಗೆ ತರುವುದು ಅವಶ್ಯಕ ಎಂದು ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಬಂಟ್ವಾಳ ಚಂದ್ರಶೇಖರ ವೈ. ತಳವಾರ ಹೇಳಿದ್ದಾರೆ.
ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ (ರಿ) ಬಂಟ್ವಾಳ, ಕಾರ್ಮಿಕ ಇಲಾಖೆ ಬಂಟ್ವಾಳ, ಶಿಕ್ಷಣ ಇಲಾಖೆ ಬಂಟ್ವಾಳ ಮತ್ತು ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಆಶ್ರಯದಲ್ಲಿ ಸೋಮವಾರ ನಡೆದ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಪ್ರಯುಕ್ತ ಕಾನೂನು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆಲ್ಲಾ ಶಾಲೆಗಳಿಗೆ ತೆರಳುವುದೇ ಕಷ್ಟವಾಗುತ್ತಿದ್ದ ಪರಿಸ್ಥಿತಿ ಇತ್ತು. ಇಂದು ಗ್ರಾಮಕ್ಕೊಂದು ಶಾಲೆ ಇರುವ ಸಂದರ್ಭವೂ ಮಕ್ಕಳು ಕಾರ್ಮಿಕರಾಗುವ ಬದಲು ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿಸುವತ್ತ ನಮ್ಮ ಜವಾಬ್ದಾರಿ ಇರಬೇಕು ಎಂದವರು ಹೇಳಿದರು.
ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್, ತಾಲೂಕಿನಲ್ಲಿ 30 ಮಂದಿ ಶಾಲೆ ಬಿಟ್ಟವರು ಇದ್ದು, ಅವರು ವಲಸಿಗರಾಗಿದ್ದಾರೆ. ಇಂಥವರನ್ನು ಮನವೊಲಿಸುವ ಕಾರ್ಯ ನಡೆಯುತ್ತಿದ್ದು, ಇಂದು ಕೇವಲ ಅಕ್ಷರಾಭ್ಯಾಸ ಮಾಡಲಾಗುತ್ತಿದ್ದು, ಮಕ್ಕಳನ್ನು ನಿಜ ಅರ್ಥದಲ್ಲಿ ವಿದ್ಯಾವಂತರನ್ನಾಗಿಸಿದರೆ, ಸಮಾಜದಲ್ಲಿ ಒಳ್ಳೆಯತನ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ರಾಜೇಶ್ ಕುಮಾರ್ ಬೊಳ್ಳುಕಲ್ಲು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಹರಿಣಿಕುಮಾರಿ ಡಿ, ಪ್ರೌಢಶಾಲೆಯ ಸಂಚಾಲಕ ಡಾ. ಪಿ.ವಿಶ್ವನಾಥ ನಾಯಕ್, ಕಾರ್ಮಿಕ ನಿರೀಕ್ಷಕರಾದ ಮೆರ್ಲಿನ್ ಡಿಸೋಜ, ಶಿಕ್ಷಣ ಇಲಾಖೆ ಅಧಿಕಾರಿ ಸುಜಾತಾಕುಮಾರಿ, ಶಾಲಾ ಮುಖ್ಯೋಪಾಧ್ಯಾಯ ಭೋಜ ಉಪಸ್ಥಿತರಿದ್ದರು. ನ್ಯಾಯವಾದಿ ಶೈಲಜಾ ರಾಜೇಶ್ ಅವರು ಬಾಲಕಾರ್ಮಿಕ ವಿರೋಧಿ ದಿನದ ಕುರಿತು ಮಾಹಿತಿ ನೀಡಿದರು. ಶಿಕ್ಷಕರಾದ ಸುಧಾಕರ್ ಕಾರ್ಯಕ್ರಮ ನಿರ್ವಹಿಸಿದರು. ಧನರಾಜ್ ವಂದಿಸಿದರು.
Be the first to comment on "ಪಾಣೆಮಂಗಳೂರು ಶಾರದಾ ಹೈಸ್ಕೂಲಿನಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ"