ಕಾಂಗ್ರೆಸ್ ಪಕ್ಷ ನೀಡುವ ಜವಾಬ್ದಾರಿಗೆ ಬದ್ಧ, ಸಕ್ರಿಯ ರಾಜಕಾರಣದಲ್ಲಿರುತ್ತೇನೆ, ಲೋಕಸಭಾ ಚುನಾವಣೆಗೆ ಈಗಿಂದಲೇ ತಯಾರಿ ಆರಂಭಿಸಲಾಗುವುದು ಎಂದು ಬಂಟ್ವಾಳದಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟನಾತ್ಮಕ ಮಟ್ಟದಲ್ಲಿ ಬೆಳೆಸುವ ಕಾರ್ಯವನ್ನು ಮಾಡುತ್ತೇನೆ. ಪಕ್ಷದ ವರಿಷ್ಠರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ಮತ್ತು ಪಕ್ಷಕ್ಕೆ ನನ್ನಿಂದ ಸಹಾಯವಾಗುತ್ತದೆ ಎಂದರೆ ನಾನು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತನಗೆ ವಯಸ್ಸಾಯಿತು ಎಂದು ಕೆಲವರು ಅಪಪ್ರಚಾರ ಮಾಡಿದರು. ನಾನು ಗೆದ್ದರೆ, ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುತ್ತೇನೆ ಎಂಬ ಭೀತಿಯಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುದಂಧೆಕೋರರು ನನ್ನ ಸೋಲಿಗೆ ಶ್ರಮಿಸಿದ್ದಾರೆ ಎಂದರು. ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸೋಲಿನ ಪರಾಮರ್ಶೆಯನ್ನು ಮಾಡುತ್ತೇನೆ. ಅವರೊಂದಿಗೆ ನನ್ನ ಮನದಾಳದ ಮಾತನ್ನು ಬಿಚ್ಚಿಡುತ್ತೇನೆ ಎಂದರು.
ನನಗೆ ಪೂರ್ವಜರಿಂದ ಬಂದ ಬಳುವಳಿಯಿಂದ ಸಣ್ಣ ಮಟ್ಟಿನ ಕೃಷಿ ಮಾಡುತ್ತಿದ್ದೇನೆ ನಾನು ಎಲ್ಲಿಂದಲೋ ಬಂದು ಚುನಾವಣೆಗೆ ನಿಂತಿಲ್ಲ ಎಂದರು. ಈಗ ನಮ್ಮದೇ ಸರಕಾರ ಇದ್ದು, ಬಂಟ್ವಾಳ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ತಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.
ಮಂಗಳೂರಿನಲ್ಲಿ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಹೇಳಿಲ್ಲ. ಹೈಕಮಾಂಡ್ ಏನನ್ನು ಸೂಚಿಸುತ್ತದೆಯೋ ಅದನ್ನೇ ಪಾಲಿಸುತ್ತೇನೆ. ನಾನು ವ್ಯಾಪಾರಿಯಲ್ಲ, ಹೊರಗಿನಿಂದ ಕ್ಷೇತ್ರಕ್ಕೆ ಬಂದಿಲ್ಲ. ಮಂಗಳೂರಲ್ಲೂ ಮನೆ ಮಾಡಿಲ್ಲ. ಪಕ್ಷದ ಹೈಕಮಾಂಡ್ ಏನನ್ನು ಸೂಚಿಸುತ್ತದೆಯೋ ಅದನ್ನೇ ಮಾಡುತ್ತೇನೆ. ಪಕ್ಷ ನೀಡುವ ಜವಾಬ್ದಾರಿಗಳನ್ನು ಸ್ವೀಕರಿಸುತ್ತೇನೆ, ನನಗೆ ವಯಸ್ಸಾಗಿಲ್ಲ ಎಂದರು.
ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ,ಹಾಗೂ ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರು ಆಯ್ಕೆಯಾಗಿದ್ದು ಅವರಿಗೆ ಬಂಟ್ವಾಳ ಕ್ಷೇತ್ರದ ಸಮಸ್ತ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಮೀಷನ್ ವ್ಯವಹಾರದಲ್ಲಿ ನಾನು ತೊಡಗಿಲ್ಲ ಇಷ್ಟು ವರ್ಷದ ರಾಜಕಾರಣದಲ್ಲಿ ಶುಧ್ದ ಹಸ್ತದ ರಾಜಕೀಯ ಮಾಡಿದ್ದೇನೆ, ಕ್ಷೇತ್ರದ ಜನತೆ ಗೌರವ ತರುವ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್ ಮಹಮ್ಮದ್, ಪದ್ಮಶೇಖರ್ ಜೈನ್, ಪಕ್ಷ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಬಿ.ಎಂ. ಅಬ್ಬಾಸ್ ಆಲಿ, ಸುದರ್ಶನ ಜೈನ್ ಪಂಜಿಕಲ್ಲು, ಮಾಯಿಲಪ್ಪ ಸಾಲ್ಯಾನ್, ಇಬ್ರಾಹಿಂ ನವಾಜ್ ಬಡಕಬೈಲು, ಸದಾಶಿವ ಬಂಗೇರ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಬಿ.ಮೋಹನ್, ಜಗದೀಶ್ ಕೊಯ್ಲ ಉಪಸ್ಥಿತರಿದ್ದರು
Be the first to comment on "ಕಾಂಗ್ರೆಸ್ ಪಕ್ಷ ನೀಡುವ ಜವಾಬ್ದಾರಿಗೆ ಬದ್ಧ, ಪಕ್ಷ ಸಂಘಟನೆಗೆ ರಾಜಕಾರಣದಲ್ಲಿ ಸಕ್ರಿಯ, ಲೋಕಸಭಾ ಚುನಾವಣೆಗೆ ಪಕ್ಷ ಗೆಲ್ಲಿಸಲು ಈಗಿಂದಲೇ ತಯಾರಿ – ಮಾಜಿ ಸಚಿವ ರಮಾನಾಥ ರೈ"