ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಪರ ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಇದ್ದು, ಗೆಲುವು ನಿಶ್ಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವ ಆರ್.ಪದ್ಮರಾಜ್ ಹೇಳಿದ್ದಾರೆ.
ಬಂಟ್ವಾಳದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಘೋಷಣೆ ಹಿಂದೆ ರಮಾನಾಥ ರೈ ಅವರಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ. ರಾಜ್ಯದಲ್ಲಿ ಹಾಗೂ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಪರ ಅಲೆ ಇದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನ ಭ್ರಷ್ಟಾಚಾರರಹಿತ ಆಡಳಿತದಿಂದ ಸಾಧ್ಯ.ಗ್ಯಾರಂಟಿ ಅನುಷ್ಠಾನಕ್ಕೆ 60 ಸಾವಿರ ಕೋಟಿ ರೂಪಾಯಿ ಬೇಕು. ಇದು ಪೊಳ್ಳು ಭರವಸೆಯಲ್ಲ. ಇದರ ಅನುಷ್ಠಾನಕ್ಕೆ ಪೂರಕ ಹಣ ಒದಗಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಗೆ ಸುಳ್ಳು ಭರವಸೆ ಕೊಟ್ಟು ಅಭ್ಯಾಸ. ಹೀಗಾಗಿ ತಮ್ಮಂತೆ ಕಾಂಗ್ರೆಸ್ ಎಂದು ಭಾವಿಸುತ್ತಾರೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಾಗಲೂ ಭರವಸೆ ಈಡೇರಿಸಿದೆ. ಈಗಲೂ ಬದ್ಧವಾಗಿದೆ ಎಂದರು. ರಾಜ್ಯ ಸರಕಾರ ಹಿಂದುಳಿದ ವರ್ಗದವರನ್ನು ತುಳಿಯುವ ಕೆಲಸ ಮಾಡಿತ್ತು ಎಂಬುದನ್ನು ಈಗ ಜನರು ಅರಿತಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಕುಕೃತ್ಯಕ್ಕೆ ತಳ್ಳುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ರಾಜ್ಯದ ಚುನಾವಣೆ ದೇಶದ ದಿಕ್ಕು ಬದಲಾಯಿಸಬಹುದು. ಇಂದು ಕರ್ನಾಟಕದಾದ್ಯಂತ ಕಾಂಗ್ರೆಸ್ ಅಲೆ ಇದೆ ಎಂದರು.
ನಾನು ಷರತ್ತುಗಳನ್ನು ಹಾಕಿ ಪಕ್ಷಕ್ಕೆ ಬಂದವನಲ್ಲ. ಟಿಕೆಟ್ ಆಫರ್ ನಿರಾಕರಿಸಿದ್ದೆ ಎಂದು ತಾನು ಪಕ್ಷ ಸೇರ್ಪಡೆ ಮಾಡಿದ ಕುರಿತು ಅವರು ಸ್ಪಷ್ಟಪಡಿಸಿದರು.
ಕೆಪಿಸಿಸಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸಂಜೀವ ಪೂಜಾರಿ, ಉಮೇಶ್ ಸಪಲ್ಯ, ಮಾಯಿಲಪ್ಪ ಸಾಲಿಯಾನ್, ಜಯಂತಿ ಪೂಜಾರಿ, ವಾಸು ಪೂಜಾರಿ, ಉಮೇಶ್ ನಾವರ, ರಿಯಾಜ್ ಹುಸೈನ್, ಸುಭಾಶ್ಚಂದ್ರ ಶೆಟ್ಟಿ, ಜೋಸ್ಫಿನ್ ಡಿಸೋಜ, ತಿಮ್ಮಪ್ಪ ಪೂಜಾರಿ, ಜಗದೀಶ್ ಕೊಯ್ಲ ಉಪಸ್ಥಿತರಿದ್ದರು.
Be the first to comment on "ರಮಾನಾಥ ರೈ ಸಾಧನೆಗಳ ಹಿನ್ನೆಲೆಯಲ್ಲಿ ಗೆಲುವು ನಿಶ್ಚಿತ: ಆರ್. ಪದ್ಮರಾಜ್"