ಬಂಟ್ವಾಳ: ಬಿಎಲ್ ಒ ಆಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಫರ್ಲಾ ಅಂಗನವಾಡಿ ಕಾರ್ಯಕರ್ತೆ ಲತಾ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶವನ್ನು ರದ್ದು ಪಡಿಸಿ ಅವರನ್ನು ಮತ್ತೆ ಹುದ್ದೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ವಾರದ ಗಡುವು ನೀಡಿದೆ.
ಸೋಮವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಅವರು ಮಾಹಿತಿ ನೀಡಿ ಲತಾ ಅವರು ಬಿಎಲ್ ಒ ಕೆಲಸ ನಿರ್ವಹಿಸಲು ಅಸಾಧ್ಯವಾಗುತ್ತಿರುವ ಬಗ್ಗೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲರಿಗೂ ಲಿಖಿತವಾಗಿ ಮತ್ತು ಖುದ್ದಾಗಿ ಪರಿಸ್ಥಿತಿಯನ್ನು ವಿವರಿಸಿದ್ದರೂ, ಜಿಲ್ಲಾಧಿಕಾರಿ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ಸಾಕಷ್ಟು ಕೆಲಸಗಳಿದ್ದು, ಬಿಎಲ್ ಒ ಹುದ್ದೆ ನಿರ್ವಹಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕೆಂದು ಹಲವು ಬಾರಿ ಮನವಿ ಮಾಡಲಾಗಿತ್ತಾದರೂ ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಡ ಹೇರುವುದರ ಜೊತೆಗೆ ತಮ್ಮ ಮೇಲಾಧಿಕಾರಿಯವರಿಗೆ ತಪ್ಪು ಮಾಹಿತಿಯನ್ನು ನೀಡಿ ಅಮಾನತಿಗೆ ಪ್ರೆರೇಪಿಸುತ್ತಾರೆ. ಇಲ್ಲಿ ಲತಾ ಅವರು ಕೂಡ ಬಂಟ್ವಾಳ ತಹಶೀಲ್ದಾರರಿಗೆ, ಸಿಡಿಪಿಒ ಅವರ ಮೂಲಕ ಹಾಗೂ ಖುದ್ದಾಗಿ ವಿವರಣೆ ನೀಡಿದರೂ ಅವರನ್ನು ಅಮಾನತು ಮಾಡಲಾಗಿದೆ ಎಂದರು.
ಸಂಘದ ಮೂಲಕ ಮಂಗಳವಾರವೇ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ದಾಖಲೆ ಸಹಿತ ಅವರಿಗೆ ವಿವರಣೆ ನೀಡಿ ಬಡಪಾಯಿ ಲತಾ ಅವರ ಅಮಾನತು ಆದೇಶ ವಾಪಾಸ್ ಪಡೆದು ಹುದ್ದೆಯಲ್ಲಿಮುಂದುವರಿಸಲು ಒತ್ರಾಯಿಸಲಾಗುವುದು ಅಲ್ಲದೆ ಈಗಾಗಲೇ ಸಿಡಿಪಿಒ,ಡಿ.ಡಿ ಹಾಗೂ ನಿರೂಪಣಾಧಿಕಾರಿಯವರನ್ನು ಭೇಟಿಯಾಗಿ ಚರ್ಚಿಸಿದ್ದು,ಲತಾ ಅವರಿಗಾದ ಅನ್ಯಾಯವನ್ನು ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಯಶ್ರೀ,ಸುಲೋಚನಾ,ರೇಣುಕಾ ,ಲತಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Be the first to comment on "ಅಮಾನತು ಆದೇಶ ಹಿಂಪಡೆಯಲು ವಾರದ ಗಡುವು ನೀಡಿದ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ"