ಮಾಜಿ ಸಚಿವ ಬಿ.ರಮಾನಾಥ ರೈ ಅವರು ಒಂಭತ್ತನೇ ಬಾರಿ ಬಂಟ್ವಾಳ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ಕಚೇರಿಯನ್ನು ಬಿ.ಸಿ.ರೋಡಿನಲ್ಲಿ ಉದ್ಘಾಟಿಸಲಾಯಿತು.
ಹಿರಿಯ ಕಾರ್ಯಕರ್ತರಾದ ಬೇಬಿ ನಾಯ್ಕ್, ಬಾಳಪ್ಪ ಶೆಟ್ಟಿ, ಜನಾರ್ದನ ಶೆಟ್ಟಿ, ರಾಮಣ್ಣ ಪೂಜಾರಿ, ವೆಲೇರಿಯನ್ ಡಿಸೋಜ, ಹಾಜಿ ಬಿ.ಎಚ್.ಖಾದರ್, ಜಿನರಾಜ ಆರಿಗ ಕಚೇರಿಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ರಮಾನಾಥ ರೈ, ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ಅವಕಾಶ ನೀಡಿದೆ. ಕಳೆದ ತನ್ನ ಅವಧಿಯಲ್ಲಿ ಉತ್ತಮ ಕೆಲಸಕಾರ್ಯಗಳನ್ನು ಮಾಡಿದ್ದರೂ ಅಪಪ್ರಚಾರವನ್ನು ಸತತವಾಗಿ ಮಾಡುವ ಮೂಲಕ ಸೋಲಿಸಲಾಯಿತು. ಈ ಬಾರಿಯೂ ಅದನ್ನು ವಿರೋಧಿಗಳು ಮುಂದುವರಿಸುತ್ತಿದ್ದು, ಕಾರ್ಯಕರ್ತರು ಅದನ್ನು ಸಮರ್ಥವಾಗಿ ಎದುರಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ನಾಮಪತ್ರ ಸಲ್ಲಿಕೆಯ ದಿನಾಂಕವನ್ನು ನಿಗದಿಗೊಳಿಸಬೇಕಾಗಿದೆ. ತನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು, ಈಗಿನ ಶಾಸಕರ ಅವಧಿಯಲ್ಲಿ ಅಂಬೇಡ್ಕರ್ ಭವನ ಸಹಿತ ಸುದೀರ್ಘ ಕಾಲ ಅಪೂರ್ಣವಾಗಿ, ವಿಳಂಬವಾಗಿ ನಡೆಸಲಾಗುತ್ತಿರುವ ಕಾರ್ಯಗಳ ಸಹಿತ ಹಲವು ವಿಚಾರಗಳನ್ನು ನಾನು ಜನತೆಯ ಮುಂದಿಡಲಿದ್ದೇನೆ. ಜನತೆಯ ಪೂರ್ಣ ಬೆಂಬಲ ದೊರಕುವ ವಿಶ್ವಾಸವಿದೆ ಎಂದರು. ನಾನು ಎಲ್ಲ ಜಾತಿ, ಮತ, ಧರ್ಮೀಯರನ್ನು ಸಮಾನವಾಗಿ ನೋಡುತ್ತಾ ಬಂದಿದ್ದು, ನಾನು ಮತ್ತೆ ಶಾಸಕನಾದರೆ ಪರಿಣಾಮಕಾರಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖ ಮುಖಂಡರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಅಬ್ಬಾಸ್ ಆಲಿ ಬೋಳಂತೂರು, ಜೋಸ್ಫಿನ್ ಡಿಸೋಜ, ಲವೀನಾ ವಿಲ್ಮಾ ಮೊರಾಸ್, ಜಯಂತಿ ಪೂಜಾರಿ, ಸುದರ್ಶನ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಮಹಮ್ಮದ್ ಶರೀಫ್, ಮೋಹನ ಗೌಡ, ಲುಕ್ಮಾನ್ ಬಂಟ್ವಾಳ, ಜನಾರ್ದನ ಚಂಡ್ತಿಮಾರ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪದ್ಮನಾಭ ರೈ, ಇಬ್ರಾಹಿಂ ನವಾಜ್ ಬಡಕಬೈಲ್, ಪ್ರತಿಭಾ ಕುಳಾಯಿ, ಸುಭಾಶ್ವಂದ್ರ ಶೆಟ್ಟಿ ಕೊಳ್ನಾಡು, ಸದಾಶಿವ ಬಂಗೇರ, ಮಹಮ್ಮದ್ ನಂದರಬೆಟ್ಟು, ಲೋಲಾಕ್ಷ ಶೆಟ್ಟಿ, ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಸಹಿತ ಜಿಲ್ಲೆ, ತಾಲೂಕುಗಳ ಮುಖಂಡರು, ಪುರಸಭೆ, ಗ್ರಾಪಂಗಳ ಸದಸ್ಯರು ಉಪಸ್ಥಿತರಿದ್ದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ ವಂದಿಸಿದರು. ಬಳಿಕ ಮಾಜಿ ಸಚಿವ ಯು.ಟಿ.ಖಾದರ್ ಆಗಮಿಸಿ ಶುಭ ಹಾರೈಸಿದರು.
Be the first to comment on "ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸುವ ಕಾರ್ಯ: ಚುನಾವಣಾ ಕಚೇರಿ ಉದ್ಘಾಟನೆಯಲ್ಲಿ ಮಾಜಿ ಸಚಿವ ರೈ"