ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ ಶ್ರೀ ಗುರುದೇವಾನಂದ ಸ್ವಾಮಿಗಳವರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ಈ ಪ್ರಯುಕ್ತ ಶ್ರೀ ರಾಮನವಮಿಯ ಸೂರ್ಯೋದಯದಿಂದ ಆರಂಭಗೊಂಡ ಅಖಂಡ (ನಿರಂತರ 168ಗಂಟೆಗಳ) ಭಗವನ್ನಾಮ ಸಂಕೀರ್ತನೆ ಮಂಗಲ ಪ್ರಾತಃಕಾಲ ನಡೆಯಿತು. ಬೆಳಿಗ್ಗೆ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ನಾಗತಂಬಿಲ ಬಳಿಕ ಶ್ರೀಮದ್ರಾಮಾಯಣ ಮಹಾಯಜ್ಞ ಆರಂಭಗೊಂಡಿತು. ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಗುರುದೇವಾನಂದ ಸ್ವಾಮೀಜಿ, ಭಜನೆ ಭಾವನಾತ್ಮಕ ಸಂಬಂಧಗಳ ಬೆಸುಗೆಯಾಗಿದ್ದು, ಬದುಕಿನ ಪಾಠವನ್ನು ಕಲಿಸುತ್ತದೆ. ಇಂದು ವಾಲ್ಮೀಕಿಯ ಬದುಕಿನ ಪಾಠದ ಜೊತೆಗೆ ರಾಮಾಯಣದ ಒಳಹೊಕ್ಕು ಆಧ್ಯಾತ್ಮದ ಅರಿವನ್ನು ನಾವು ಹೊಂದಬೇಕಾಗಿದೆ ಎಂದರು.’
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ ಹಲವು ಸಾಧಕರಿಗೆ ಶಕ್ತಿ ಕೊಡುವ ಕೆಲಸವನ್ನು ಒಡಿಯೂರು ಶ್ರೀಗಳು ಮಾಡಿದ್ದಾರೆ. ನಾವೆಲ್ಲರೂ ಕಾಯಾ, ವಾಚಾ ಮನಸಾ ಒಂದು ಎಂಬ ತತ್ವಪ್ರಸಾರವನ್ನು ಒಡಿಯೂರಿನಲ್ಲಿ ಮಾಡಲಾಗುತ್ತಿದೆ ಎಂದರು.
ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನಿಧ್ಯ ವಹಿಸಿದ್ದರು. ಮುಂಬಯಿ ಉದ್ಯಮಿಗಳಾದ ವಾಮಯ್ಯ ಶೆಟ್ಟಿ, ದಾಮೋದರ ಶೆಟ್ಟಿ, ಡಾ. ಆದೀಪ್ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ರೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ನಿರ್ದೇಶಕ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಯಶವಂತ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ ಭಂಡಾರಿ ವಂದಿಸಿದರು. ಮಧ್ಯಾಹ್ನ ಯಜ್ಞದ ಪೂರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ ನಡೆಯಿತು.
Be the first to comment on "ಒಡಿಯೂರಿನಲ್ಲಿ ಶ್ರೀ ಹನುಮೋತ್ಸವ, ಶ್ರೀಮದ್ರಾಮಾಯಣ ಮಹಾಯಜ್ಞ ಸಂಪನ್ನ"