ಮತೀಯವಾದದ ಅಜೆಂಡಾದಿಂದ ದೇಶ ನಡೆಸಲು ಸಾಧ್ಯವಿಲ್ಲ. ಇದರಿಂದ ಪ್ರಜಾಪ್ರಭುತ್ವದ ರಾಜಕೀಯದ ಮೌಲ್ಯಗಳು ಕುಸಿತವಾಗುತ್ತಿದೆ. ಜನರನ್ನು ಉದ್ರೇಕಿಸಿ ಭಾವನಾತ್ಮಕವಾಗಿ ಮಾತನಾಡುವುದು ನಡೆಯುತ್ತಿದೆ ಎಂದು ಲೇಖಕ, ಮುಖಂಡ ಎಂ.ಜಿ.ಹೆಗಡೆ ಹೇಳಿದರು.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮೊಗರ್ನಾಡು ಎಂಬಲ್ಲಿ ಗುರುವಾರ ರಾತ್ರಿ ನಡೆದ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಪ್ರಧಾನ ಭಾಷಣ ಮಾತನಾಡಿದರು.
ಇಂದು ವಿನಾಕಾರಣ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಮಾಡಲಾಗುತ್ತಿದೆ. ಅಭಿವೃದ್ಧಿ ವಿಚಾರಗಳ ಕುರಿತು ಕೇಳಿದರೆ, ಬೇರೆಯದ್ದೇ ವಿಷಯಗಳನ್ನು ಹೇಳಿ ಬಾಯಿ ಮುಚ್ಚಿಸಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕುರಿತು ಮಾತನಾಡಿದರೆ, ಎದ್ದು ಹೋಗುವವರಿದ್ದಾರೆ. ವಿನಾ ಕಾರಣ 70 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಲಿಲ್ಲ ಎನ್ನುತ್ತಾರೆ. ಆದರೆ ಮೂವತ್ತು ವರ್ಷಗಳಿಂದ ಮಂಗಳೂರಲ್ಲಿ ಬಿಜೆಪಿ ಸಂಸದರು ಇದ್ದಾರೆ. ಅವರೂ ಏನೂ ಮಾಡಿಲ್ಲವೇ ಎಂದು ಪ್ರಶ್ನಿಸಿದ ಅವರು, ದಿಢೀರನೆ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ರಸ್ತೆ, ವಿಮಾನ ನಿಲ್ದಾಣ, ಬಂದರು, ಕಾಲೇಜುಗಳು ಉದ್ಭವವಾದವೇ, ಕೇವಲ ಮತೀಯ ಭಾಷಣ ಮಾಡುವ ಮೂಲಕ ಜನರನ್ನು ಪ್ರತ್ಯೇಕಿಸಿ ಸುಳ್ಳಿನ ಕತೆ ಹೆಣೆಯುವುದರ ಬದಲು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡೋಣ ಎಂದರು. ರಾಜಕೀಯ ಹೇಳಿಕೆ, ಟೀಕೆಗಳನ್ನು ಸಹಿಸಲು ಅಸಾಧ್ಯವಾಗದೆ ಕೇಸ್ ಹಾಕುವುದರ ವಿರುದ್ಧ ಸುಮ್ಮನೆ ಕುಳಿತುಕೊಳ್ಳಬಾರದು. ರಾಜಕೀಯ ನಾಯಕರು ಟೀಕೆಗಳನ್ನು ಆರೋಗ್ಯಕರವಾಗಿ ಸ್ವೀಕರಿಸುತ್ತಿಲ್ಲ ಎಂಬುದಕ್ಕೆ ಇದು ನಿದರ್ಶನ ಎಂದ ಹೆಗಡೆ, ಬಿಜೆಪಿ ಏಕಮುಖಿ ಸಂಸ್ಕೃತಿಯ ಪ್ರತಿರೂಪವಾಗಿ. ಹಿಂಸೆ, ಕೋಪ, ಅಸಹನೆಗಳನ್ನು ಹುಟ್ಟುಹಾಕುತ್ತಿರುವುದು ವಿಷಾದನೀಯ ಎಂದರು.
ತಾಲೂಕಿಗೆ ಇಂಜಿನಿಯರಿಂಗ್ ಕಾಲೇಜು:
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಈ ಬಾರಿ ವಿಜಯಿಯಾದರೆ, ತಾಲೂಕಿಗೆ ಸರಕಾರಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಹೇಳಿದರು. ಬೆಂಜನಪದವಿನಲ್ಲಿ ಬೃಹತ್ ಮಟ್ಟದ ಕ್ರೀಡಾಂಗಣ ಹಾಗೂ ಅದಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ ರೈ, ನಾನು ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ಜಾತಿ, ಧರ್ಮ ಮೀರಿ ಸಹಾಯ ಮಾಡಿದ್ದೇನೆ. ಕೆಲವರು ಭಾಷಣದಲ್ಲಿ ರಾಜಧರ್ಮ ಕುರಿತು ಹೇಳುತ್ತಾರೆ. ದ್ವೇಷ ಮಾಡುವುದು ರಾಜ ಧರ್ಮ ಅಲ್ಲ. ಕೆಲಸ ಮಾಡಿ ನಾನು ಕಳೆದ ಬಾರಿ ಸೋತಿದ್ದೆ. ನೀವು ನಾನು ಮಾಡಿದ ಕೆಲಸಗಳನ್ನು ಮಾಹಿತಿ ಹಕ್ಕಿನಲ್ಲಿ ಕೇಳಿ ಎಂದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೆ ತರುವಾಗ ದುಡ್ಡು ಎಲ್ಲಿಂದ ಎಂಬುದು ಬಿಜೆಪಿಗೆ ಚಿಂತೆ. ಆದರೆ ಯೋಚನೆಯನ್ನು ಮಾಡಿ ಸಮಾಜಕ್ಕೆ ಬೇಕಾಗುವ ಕೆಲಸ ಮಾಡುತ್ತದೆ. ಬಿಜೆಪಿಯಂತೆ ಬಡವರ ಕಿಸೆಗೆ ಕೈಹಾಕುವುದಿಲ್ಲ ಎಂದರು.
ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಕಾಶ್ ಕಾರಂತ, ಸುದರ್ಶನ ಜೈನ್, ಸಂಜೀವ ಪೂಜಾರಿ, ಸದಾಶಿವ ಬಂಗೇರ, ಪದ್ಮನಾಭ ರೈ, ಮಹಮ್ಮದ್ ಶರೀಫ್, ಆಲ್ಫೋನ್ಸ್ ಮಿನೇಜಸ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಜೆಸಿಂತಾ ಡಿಸೋಜ, ರವೀಂದ್ರ ಸಪಲ್ಯ, ಉಮೇಶ್ ಬೋಳಂತೂರು, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಚಂದ್ರಶೇಖರ ಪೂಜಾರಿ, ಐಡಾ ಸುರೇಶ್, ಜೋಸ್ಫಿನ್ ಡಿಸೋಜ, ಜಯಂತಿ ಪೂಜಾರಿ, ಸಿದ್ದೀಕ್ ಗುಡ್ಡೆಯಂಗಡಿ, ಲೋಕಾಕ್ಷ ಶೆಟ್ಟಿ, ಸುನೀತಾ ಪದ್ಮನಾಭ, ಎಡ್ತೂರು ರಾಜೀವ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಆಳ್ವ ಕೊಡಾಜೆ ಅವರು ರಮಾನಾಥ ರೈ ಅವರ ಸಾಧನೆ ಪಟ್ಟಿ ನೀಡಿದರು. ಮುಖಂಡರಾದ ಪ್ರಕಾಶ್ ಕಾರಂತ್ ನರಿಕೊಂಬು ಗ್ರಾಮಕ್ಕೆ ರೈ ನೀಡಿದ ಕೊಡುಗೆ ವಿವರ ನೀಡಿದರು.
Be the first to comment on "ಮತೀಯವಾದ ಅಜೆಂಡಾದಿಂದ ಪ್ರಜಾಪ್ರಭುತ್ವದ ಮೌಲ್ಯ ಕುಸಿತ: ಎಂ.ಜಿ.ಹೆಗಡೆ"