ಬಂಟ್ವಾಳ: ಉಳ್ಳಾಲ ತಾಲೂಕಿನ ಇರಾ ಗ್ರಾಮದ ತಿರುವಾಲೆ ಎಂಬಲ್ಲಿ ಶ್ರೀ ವಯನಾಡು ವಿಷ್ಣುಮೂರ್ತಿ ದೈವಸ್ಥಾನದ ಒತ್ತೆಕೋಲ ಕೆಂಡಸೇವೆ ಮಾರ್ಚ್ 18ನೇ ಶನಿವಾರದಿಂದ 19ರ ಭಾನುವಾರದವರೆಗೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಡಿ. ದೇರಾಜೆಗುತ್ತು ಹೇಳಿದ್ದಾರೆ.
ಕ್ಷೇತ್ರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಬಿರ್ಮಣ ಆತಾರ್ ಮತ್ತು ಕರಿಂಬಲ್ಪು ತರವಾಡು ಸತೀಶ್ ಬೈಜೇರ್ ಪಟ್ಟತ್ತೂರು ಅವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಕ್ಷೇತ್ರದ ಜೀರ್ಣೋದ್ಧಾರದ ಬಳಿಕ ಇದೀಗ 5 ವರ್ಷದ ಬಳಿಕ ಮತ್ತೆ ಇಲ್ಲಿ ಒತ್ತೆಕೋಲ ನಡೆಯಲಿದೆ. ಸುಮಾರು 40 ಅಡಿಗಳ ಎತ್ತರಕ್ಕೆ ಕಟ್ಟಿಗೆಯ ರಾಶಿ ಹಾಕಲಿದ್ದು ಸುತ್ತಮುತ್ತಲಿನ ಪ್ರದೇಶಗಳ ಭಕ್ತರಷ್ಟೇ ಅಲ್ಲ, ಹೊರಭಾಗಗಳಿಂದಲೂ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭ ಮಹಾಕೊಲ್ಲಿ ಸೇವೆ, ಕಿರುಕೊಲ್ಲಿ ಸೇವೆಗೂ ಭಕ್ತಾದಿಗಳಿಗೆ ಅವಕಾಶವಿದ್ದು, 17ರಂದು ಹೊರೆಕಾಣಿಕೆ ಬೋಳಂತೂರು, ಮಂಚಿ, ಇರಾ, ಸಜಿಪನಡು, ಸಜಿಪಪಡು, ಸಜಿಪಮೂಡ, ಚೇಳೂರು, ಬೋಳಿಯಾರು ಗ್ರಾಮದ ಭಕ್ತರಿಂದ ಸಮರ್ಪಣೆಯಾಗಲಿದೆ. 18ರಂದು ಶನಿವಾರ ಮೇಲೇರಿ ರಚನೆ, ಸಂಜೆ ದೈವಗಳ ಭಂಡಾರ ಏರುವುದು, ರಾತ್ರಿ 8ಕ್ಕೆ ಧಾರ್ಮಿಕ ಸಭೆ, ವಿಷ್ಣುಮೂರ್ತಿ ದೈವದ ತೊಡಂಗಲ್ ಮತ್ತು ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ 11ಕ್ಕೆ ಕುಳಿಚ್ಚಾಟ್ಟಂ ದರ್ಶನ, ರಾತ್ರಿ ಕೆಂಡಸೇವೆ ನಡೆಯಲಿದ್ದು, ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನವೂ ನಡೆಯಲಿದೆ ಎಂದರು. 19ರಂದು ರಾತ್ರಿ ಮರುಪುತ್ತೇರಿ ಸೇವೆ ನಡೆಯಲಿದೆ ಎಂದರು.
ಕ್ಷೇತ್ರದ ಇತಿಹಾಸದ ಕುರಿತು ಟ್ರಸ್ಟಿಗಳಾದ ಬಿರ್ಮಣ ಆತಾರ್ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಿರುವಾಲೆ, ಕೋಶಾಧಿಕಾರಿ ರಮೇಶ್ ಪೂಜಾರಿ ತಿರುವಾಲೆ, ಜೊತೆ ಕಾರ್ಯದರ್ಶಿ ಅಚ್ಚುತ ಪೂಜಾರಿ ತಿರುವಾಲೆ, ಉತ್ಸವ ಸಮಿತಿ ಅಧ್ಯಕ್ಷ ವೈ.ಬಿ.ಸುಂದರ್ ಇರಾ, ಉಪಾಧ್ಯಕ್ಷ ಗೋಪಾಲ ಪೂಜಾರಿತಿರುವಾಲೆ, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕುಕ್ಕಾಜೆ, ಕೋಶಾಧಿಕಾರಿ ಜಯರಾಮ ಪೂಜಾರಿ ಸೂತ್ರಬೈಲ್, ಟ್ರಸ್ಟಿಗಳಾದ ಲಕ್ಷ್ಮಣ ಪೂಜಾರಿ ತಿರುವಾಲೆ ಉಪಸ್ಥಿತರಿದ್ದರು.
Be the first to comment on "ಇರಾ ತಿರುವಾಲೆಯಲ್ಲಿ ವಯನಾಡು ವಿಷ್ಣುಮೂರ್ತಿ ದೈವಸ್ಥಾನದ ಒತ್ತೆಕೋಲ, ಕೆಂಡಸೇವೆ"