ಹಿಂದೆ ರಾಜಕಾರಣಿಗಳು ಜನಪರ ಚಳವಳಿಗಳ ಮೂಲಕ ಹುಟ್ಟುತ್ತಿದ್ದರು, ಜನರ ಮಧ್ಯೆ ಇದ್ದು, ಅವರ ಕೆಲಸಗಳನ್ನು ಮಾಡುವ ಮೂಲಕ ಬೆಳಕಿಗೆ ಬರುತ್ತಿದ್ದರು. ಆದರೆ ಈಗ ರಾತ್ರೋರಾತ್ರಿ ಫ್ಲೆಕ್ಸ್ ಗಳನ್ನು ರಸ್ತೆ ಬದಿಯಲ್ಲಿ ಹಾಕುವ ಮೂಲಕ ಜನ್ಮ ತಾಳುತ್ತಾರೆ. ಹೊಸ ತಲೆಮಾರಿನ ರಾಜಕಾರಣಿಗಳಿಗೂ ಹಿಂದಿನ ರಾಜಕಾರಣಿಗಳಿಗೂ ಬಹಳ ವ್ಯತ್ಯಾಸವಿದೆ ಎಂದು ಹಿರಿಯ ರಾಜಕಾರಣಿ, ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದ್ದಾರೆ.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ಧಿ ಆಚರಣಾ ಸಮಿತಿಯ ವತಿಯಿಂದ ಶನಿವಾರ ನಡೆದ ಜನ್ಮಶತಾಬ್ದಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
. ಡಾ. ಅಮ್ಮೆಂಬಳ ಬಾಳಪ್ಪರಂಥವರು ಮೌಲ್ಯಾಧಾರಿತ ರಾಜಕಾರಣ ಮಾಡಿದವರು. ಹಿಂದೆ ರಾಮಕೃಷ್ಣ ಹೆಗಡೆ ಅವರು ಅಂಥ ರಾಜಕಾರಣ ಪ್ರತಿಪಾದಿಸಿದವರು. ಜವಾಹರಲಾಲ್ ನೆಹರೂ ಮತ್ತು ಲೋಹಿಯಾ ಎದುರುಬದುರಾಗಿ ಲೋಕಸಭೆಯಲ್ಲಿ ಚರ್ಚೆ ನಡೆಸುವ ಸಂದರ್ಭ ಪರಸ್ಪರ ಗೌರವಿಸುತ್ತಿದ್ದರು. ಆದರೆ ಇಂದಿನ ರಾಜಕಾರಣದಲ್ಲಿ ಭಾಷೆ ಹಳಿ ತಪ್ಪಿದೆ ಎಂದು ಖೇದ ವ್ಯಕ್ತಪಡಿಸಿದರು.
ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಡಾ.ಬಾಳಪ್ಪ ಅವರ ಸರಳತೆ ಮತ್ತು ತತ್ವಾದರ್ಶ ಕುರಿತು ಇಂದಿನ ಪೀಳಿಗೆಗೆ ಅಗತ್ಯವಾಗಿದೆ ಎಂದರು. ಅಧಿಕಾರ ಬರುತ್ತದೆ, ಹೋಗುತ್ತದೆ ಆದರೆ ಆದರ್ಶ ಮತ್ತು ಒಳ್ಳೆಯ ಕೆಲಸ ಉಳಿಯುತ್ತದೆ ಎಂದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಅಮ್ಮೆಂಬಳ ಬಾಳಪ್ಪ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಅಧ್ಯಕ್ಷತೆಯನ್ನು ಸಮಿತಿ ಗೌರವಾಧ್ಯಕ್ಷ ಅಮ್ಮೆಂಬಳ ಆನಂದ ವಹಿಸಿದ್ದರು. ಸ್ವಾತಂತ್ರ್ಯಯೋಧ ಡಾ.ಅಮ್ಮೆಂಬಳ ಬಾಳಪ್ಪ ಕುರಿತು ಡಾ.ದುಗ್ಗಪ್ಪ ಕಜೆಕಾರ್ ಉಪನ್ಯಾಸ ನೀಡಿದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸಮಿತಿ ಕಾರ್ಯಾಧ್ಯಕ್ಷ ಮಯೂರ್ ಉಳ್ಳಾಲ್, ಗೌರವಾಧ್ಯಕ್ಷ ಡಿ.ಚಂದಪ್ಪ ಮೂಲ್ಯ, ಸಂಯೋಜಕ ಮಂಜು ವಿಟ್ಲ, ಪ್ರಧಾನ ಕಾರ್ಯದರ್ಶಿ ದಾಮೋದರ ಬಿ.ಎಂ.ಮಾರ್ನಬೈಲ್, ಕೋಶಾಧಿಕಾರಿ ಉಮೇಶ್ ಪಿ.ಕೆ ನಾಗಲಚ್ಚಿಲ್, ಸಂಘಟನಾ ಕಾರ್ಯದರ್ಶಿ ಪುಂಡರೀಕಾಕ್ಷ ಮೂಲ್ಯ ಯು. ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧನೆಗಾಗಿ ದಾಮೋದರ್, ಸವಿತಾ ಗುಂಡ್ಮಿ, ಸಂತೋಷ್ ಕುಲಾಲ್ ಮತ್ತು ಡಾ. ತುಕಾರಾಮ ಪೂಜಾರಿ, ಆಶಾಲತಾ ಸುವರ್ಣ ದಂಪತಿಯನ್ನು ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ಮಯೂರ್ ಉಳ್ಳಾಲ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಹಿಂದೆ ಜನಪರ ಚಳವಳಿಗಳ ಮೂಲಕ ರಾಜಕಾರಣಿಗಳು ಉದಯವಾಗುತ್ತಿದ್ದರೆ, ಈಗ ರಾತ್ರೋರಾತ್ರಿ ಫೆಕ್ಸ್ ಗಳ ಮೂಲಕ ಜನ್ಮ ತಾಳುತ್ತಾರೆ: ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ಧ ಕಾರ್ಯಕ್ರಮದಲ್ಲಿ ವೈ.ಎಸ್.ವಿ.ದತ್ತಾ ವಿಷಾದ"