ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಟ್ಟು ಬೃಹತ್ ಆರೋಗ್ಯ ಮೇಳ ಫೆ.26 ರಂದು ಪುಂಜಾಲಕಟ್ಟೆ ಆರೋಗ್ಯ ಕೇಂದ್ರದ ವಠಾರದಲ್ಲಿ ನಡೆಯಲಿದೆ ಎಂದು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ, ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 16 ವರ್ಷದ ಬಳಿಕ ಪುಂಜಾಲಕಟ್ಟೆಯಲ್ಲಿ ಎರಡನೇ ಬಾರಿಗೆ ಬೃಹತ್ ಮಟ್ಟದಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಮಂಗಳೂರು ವೆನ್ಲಾಕ್ ಆಸ್ಪತ್ರೆ, ಎ.ಜೆ.ಆಸ್ಪತ್ರೆ,ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಗಳು, ದ.ಕ ಜಿ.ಪಂ., ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ, ಶಶಾಂಕ್ ಕ್ಯಾಶ್ಯ ಇಂಡಸ್ಟ್ರೀಸ್ ನೈನಾಡ್ ಮತ್ತು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸಹಕಾರದಲ್ಲಿ ಈ ಆರೋಗ್ಯ ಮೇಳ ನಡೆಯಲಿದೆ ಎಂದು ಅವರು ತಿಳಿಸಿದರು.
ಸಾಮಾನ್ಯ ರೋಗ, ಮೂತ್ರಪಿಂಡ,ಮಕ್ಕಳ ತಜ್ಞರು, ಸ್ತ್ರೀ ರೋಗ ಮೂಳೆ , ಕಣ್ಣು,ದಂತ ಸಹಿತ ಎಲ್ಲಾ ರೋಗಗಳಿಗೆ ಸಂಬಂಧಿಸಿ ನುರಿತ ತಜ್ಞ ವೈದ್ಯರೇ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಉಚಿತ ಔಷಧವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಆರೋಗ್ಯ ಮೇಳ ಉದ್ಘಾಟಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ಹರೀಶ್ ಪೂಂಜಾ, ಎ.ಜೆ.ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಶಾಂತ್ ಮಾರ್ಲ ಅವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂಬ ಕಳೆದ ಮೂವತ್ತು ವರ್ಷದ ಹೋರಾಟದ ಫಲವಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಮೂಲಕ ಫಲ ದೊರಕಿದೆ ಎಂದು ತಂಗಪ್ಪ ಬಂಗೇರ ತಿಳಿಸಿದರು.
ಸುಮಾರು12.40 ಕೋ.ರೂ. ವೆಚ್ಚದಲ್ಲಿ ಪುಂಜಾಲಕಟ್ಟೆ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಲಿದ್ದು,ಈಗಾಗಲೇ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯು ಮುಗಿದಿದ್ದು, ಫೆ. 26 ರಂದು ಆರೋಗ್ಯದ ಮೇಳದಂದು ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಂದ ಶಿಲಾನ್ಯಾಸ ನೆರವೇರಿಸಲು ಪ್ರಯತ್ನ ಸಾಗಿದ್ದು,ಸಾಧ್ಯವಾದಲ್ಲಿ ಅಂದು ಶಿಲಾನ್ಯಾಸ ನೆರವೇರಿಸುವ ಸಾಧ್ಯತೆ ಇದೆ ಎಂದ ಅವರು ಪ್ರಾ.ಆ.ಕೇಂದ್ರ ಮೇಲ್ದೆರ್ಜೇಗೇರಿಸುವಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪ್ರಯತ್ನಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪಿಲಾತಬೆಟ್ಟು ಗ್ರಾಮಪಂಚಾಯತ್ ಆದ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಪುನೀತ್ ಕುಮಾರ್, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ಪುಂಜಾಲಕಟ್ಟೆ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಆಸ್ಪತ್ರೆಯ ವೈದ್ಯಾಧಿಕಾರಿ ರಿತೇಶ್ ಶೆಟ್ಟಿ, ಪ್ರಮುಖರಾದ ಕಿರಣ್ , ಪಿ.ಎಮ್ ಪ್ರಭಾಕರ್, ಜಗನ್ನಾಥ್,ಮಾಧವ ಬಂಗೇರ, ಬಬಿತ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಫೆ.26ರಂದು ಪುಂಜಾಲಕಟ್ಟೆಯಲ್ಲಿ ಬೃಹತ್ ಆರೋಗ್ಯ ಮೇಳ"