ಬಂಟ್ವಾಳ: ಇಂದು ಯಕ್ಷಗಾನವನ್ನು ನಿರಂತರವಾಗಿ ಉಳಿಸಿ, ಬೆಳೆಸಲು ಕಲಾಪೋಷಕರ ಪಾತ್ರ ಹಿರಿದು, ಬೊಂಡಾಲದಲ್ಲಿ ದೀರ್ಘಕಾಲ ಯಕ್ಷಗಾನವನ್ನು ಸೇವಾರೂಪದಲ್ಲಿ ಆಡಿಸುವುದಲ್ಲದೆ, ಕಲಾವಿದರನ್ನು ಸನ್ಮಾನಿಸುವ ಮೂಲಕ ಕಲಾಮಾತೆಯ ಸೇವೆಯನ್ನೂ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯರ್ಹ ಎಂದು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದ್ದಾರೆ.
ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಬೊಂಡಾಲ ಪ್ರಶಸ್ತಿಯನ್ನು ಕಟೀಲು ಮೇಳದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರಿಗೆ ಶುಕ್ರವಾರ ರಾತ್ರಿ ಬೊಂಡಾಲದಲ್ಲಿ ನಡೆದ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು. ಯಕ್ಷಗಾನ ಬೆಳೆಯಬೇಕು ಎಂದಿದ್ದರೆ, ಕಲಾವಿದರು ಬೇಕು, ಉತ್ತಮ ಕಲಾವಿದರನ್ನು ಗುರುತಿಸುವುದು ಕಲಾಮಾತೆಯಾದ ಶ್ರೀ ದುರ್ಗಾಪರಮೇಶ್ವರಿಯ ಸೇವೆ ಎಂದು ಹೇಳಿದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕಟೀಲು ಮೇಳಗಳ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪತ್ರಕರ್ತ ಹರೀಶ ಮಾಂಬಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮಾತನಾಡಿ, ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಬಲಿಪ ಪರಂಪರೆಯನ್ನು ಮುಂದುವರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದರು.
ಇದೇ ಸಂದರ್ಭ ದಿವಂಗತ ಬಲಿಪ ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಬಲಿಪ ನಾರಾಯಣ ಭಾಗವತರ ಸಂಸ್ಮರಣೆ ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಾರಾಯಣ ಗೌಡ ಸನ್ಮಾನ ಪತ್ರ ವಾಚಿಸಿದರು. ಸೀತಾರಾಮ ಶೆಟ್ಟಿ ಬೊಂಡಾಲ ವಂದಿಸಿದರು.
Be the first to comment on "ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರಿಗೆ ಬೊಂಡಾಲ ಪ್ರಶಸ್ತಿ ಪ್ರದಾನ"