ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿರುವ ಶ್ರೀಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಜಾತ್ರೋತ್ಸವ ಕಾರ್ಯಕ್ರಮಗಳು ಫೆ.22ರಿಂದ 28ರವರೆಗೆ ನಡೆಯಲಿದೆ ಎಂದು ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ತಿಳಿಸಿದರು.ಸಮುದಾಯ ಭವನ ನಿರ್ಮಾಣ ಹಂತದಲ್ಲಿದ್ದು,ಮುಂದಿನ ದಿನಗಳಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದು ಅವರು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್ ಮಾಹಿತಿ ನೀಡಿ, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಫೆ.22ರಂದು ಮಧ್ಯಾಹ್ನ ಲಯನ್ಸ್ ಕ್ಲಬ್ ಸಂಗ್ರಹಣಾ ಕೇಂದ್ರದಿಂದ ಕೈಕಂಬ ಕೇಂದ್ರದವರೆಗೆ ಸಾಗಿ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, 23 ಮತ್ತು 24ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಜನೆ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, 25ರಂದು ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಇದರಲ್ಲಿ ಶಾಸಕ ರಾಜೇಶ್ ನಾಯ್ಕ್, ಸಚಿವ ಸುನಿಲ್ ಕುಮಾರ್, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಗಣ್ಯರು ಭಾಗವಹಿಸಲಿದ್ದು, ಸಂತರಾದ ಒಡಿಯೂರು ಮತ್ತು ಮಾಣಿಲ ಶ್ರೀಗಳು ಆಶೀರ್ವಚನ ನೀಡುವರು. 26ರಂದು ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಮತ್ತು ವಜ್ರದೇಹಿ ಶ್ರೀಗಳು ಆಶೀರ್ವಚನ ನೀಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಪ್ರಮುಖರಾದ ಪರಭಾಕರ ಭಟ್ ಮತ್ತಿತರರು ಭಾಗವಹಿಸುವರು. ಫೆ.27ರಂದು ಸೋಮವಾರ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಉತ್ಸವಾದಿಗಳು ನಡೆಯಲಿವೆ. 28ರಂದು ಯಕ್ಷಗಾನ ಬಯಲಾಟ ಇರಲಿದೆ ಎಂದರು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದಿರೇಶ್, ಜೊತೆ ಕಾರ್ಯದರ್ಶಿಗಳಾದ ಐತಪ್ಪ ಪೂಜಾರಿ, ಶಂಕರ ಶೆಟ್ಟಿ ನಡ್ಯೋಡಿಗುತ್ತು, ಕೋಶಾಧಿಕಾರಿ ಎಚ್.ಸಂಕಪ್ಪ ಶೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ಸತೀಶ್ ಭಂಡಾರಿ, ಹೊರೆಕಾಣಿಕೆ ಸಮಿತಿ ಸಂಚಾಲಕ ಕೃಷ್ಣಪ್ಪ ಬಿ.ಕಲ್ಲಡ್ಕ, ವಿವಿಧ ಪ್ರಮುಖರಾದ ಬಿ.ಮೋಹನ್, ರಮೇಶ್ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಶ್ರೀಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ: ಫೆ.22ರಿಂದ 28ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ"