ವಿಶ್ಲೇಷಣೆ: ಹರೀಶ ಮಾಂಬಾಡಿ
ಬಂಟ್ವಾಳ ಕ್ಷೇತ್ರ ಎಂಬುದು ರಚನೆಯಾದದ್ದು 1967ರಲ್ಲಿ. ವಿಟ್ಲ ಕ್ಷೇತ್ರ 1978ರಲ್ಲಿ. ವಿಟ್ಲ ಕ್ಷೇತ್ರ ಅಸ್ತಿತ್ವದಲ್ಲಿರುವ ದಿನಗಳಲ್ಲಿ ಬಿ.ಸಿ.ರೋಡ್ ಪೇಟೆ, ಪಾಣೆಮಂಗಳೂರು ಸಹಿತ ಪುರಸಭೆಯ ಅರ್ಧ ಭಾಗ ವಿಟ್ಲ ಕ್ಷೇತ್ರಕ್ಕೆ ಒಳಪಟ್ಟರೆ, ಉಳಿದ ಭಾಗ ಬಂಟ್ವಾಳ ಕ್ಷೇತ್ರಕ್ಕಿತ್ತು. ಹೀಗಾಗಿ ಬಿ.ಸಿ.ರೋಡ್ ತಾಲೂಕು ಕಚೇರಿಯ ಬಿಲ್ಡಿಂಗ್ ನಲ್ಲಿ ಬಂಟ್ವಾಳ ಶಾಸಕರ ಕಚೇರಿಯೂ, ವಿಟ್ಲ ಶಾಸಕರ ಕಚೇರಿಯೆರಡೂ ಇತ್ತು. ಇದಾದರೆ ಪರವಾಗಿಲ್ಲ, ಆದರೆ ಬಂಟ್ವಾಳ ಕ್ಷೇತ್ರ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದ ಕಾರಣ, ಎಂಪಿಗಳೂ ಬೇರೆ ಬೇರೆ. ಬಂಟ್ವಾಳ ಪೇಟೆಯವರು ಎಂಪಿಗೆ ಮನವಿ ಕೊಡಬೇಕಿದ್ದರೆ, ಉಡುಪಿಗೆ ಹೋಗಬೇಕು, ಬಿ.ಸಿ.ರೋಡ್, ಪಾಣೆಮಂಗಳೂರಿನವರು ಮನವಿ ಕೊಡಬೇಕಿದ್ದರೆ, ಮಂಗಳೂರಿಗೆ ಹೋಗಬೇಕಾದ ವಿಚಿತ್ರ ಸ್ಥಿತಿ. ಇದಕ್ಕೆ 2008ರಲ್ಲಿ ಫುಲ್ ಸ್ಟಾಪ್ ಹಾಕಲಾಯಿತು.
ಒಂದೇ ಪಕ್ಷಕ್ಕೆ ಬಂಟ್ವಾಳ ತಾಲೂಕು ಒಲಿದದ್ದು ಐದು ಬಾರಿ. (1967 ಕಾಂಗ್ರೆಸ್, 1972, ಕಾಂಗ್ರೆಸ್/ಸಿಪಿಐ ಮೈತ್ರಿ, 1978 – ಕಾಂಗ್ರೆಸ್/ಸಿಪಿಐ ಮೈತ್ರಿ 1983 – ಬಿಜೆಪಿ, 1985- ಕಾಂಗ್ರೆಸ್, 1999-ಕಾಂಗ್ರೆಸ್, 2004 – ಬಿಜೆಪಿ, 2013 – ಕಾಂಗ್ರೆಸ್. ಇಲ್ಲಿ 2004ರ ಬಳಿಕ ಕ್ಷೇತ್ರ ಪುನರ್ವಿಂಗಡೆಯಾಗಿ 2008ರ ಚುನಾವಣೆ ವೇಳೆ ಉಳ್ಳಾಲ ಅಂದರೆ ಮಂಗಳೂರು ಕ್ಷೇತ್ರ ಸೇರ್ಪಡೆ ಹೊಂದಿತು)
2008ರವರೆಗೆ ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಂಟ್ವಾಳ ಪೇಟೆಯ ಅರ್ಧ ಬಂಟ್ವಾಳ ಕ್ಷೇತ್ರದಲ್ಲಿದ್ದರೆ, ಇನ್ನರ್ಧ ವಿಟ್ಲ ಕ್ಷೇತ್ರಕ್ಕೆ ಸೇರಿತ್ತು. ಒಂದರಲ್ಲಿ ಕಾಂಗ್ರೆಸ್, ಮತ್ತೊಂದರಲ್ಲಿ ಬಿಜೆಪಿ. ಹೀಗೆ ಎಮ್ಮೆಲ್ಲೆಗಳೂ ಬೇರೆ ಬೇರೆ. ಇಂಥ ವಿಚಿತ್ರ ಸನ್ನಿವೇಶ ಈಗಲೂ ಮುಂದುವರಿದಿದೆ. ಬಂಟ್ವಾಳ ತಾಲೂಕಿನ ಬಹುಮುಖ್ಯ ಪಟ್ಟಣ ವಿಟ್ಲ ಪೇಟೆ ವಿಧಾನಸಭೆಯ ಪುತ್ತೂರು ಕ್ಷೇತ್ರಕ್ಕೆ ಒಳಪಟ್ಟರೆ, ಫರಂಗಿಪೇಟೆ ಮಂಗಳೂರು ಕ್ಷೇತ್ರಕ್ಕೆ ಸೇರುತ್ತದೆ.
ಬಂಟ್ವಾಳ ಕ್ಷೇತ್ರ ಎಂದು ರಚನೆಯಾದದ್ದು 1967ರಲ್ಲಿ. ಅದಕ್ಕೂ ಮೊದಲು ಪಾಣೆಮಂಗಳೂರು ಕ್ಷೇತ್ರ ಅಸ್ತಿತ್ವದಲ್ಲಿತ್ತು. 1967ರಲ್ಲಿ ಕಾಂಗ್ರೆಸ್ ಪಕ್ಷದ ಲೀಲಾವತಿ ರೈ ಬಂಟ್ವಾಳ ಕ್ಷೇತ್ರದಿಂದ ಗೆದ್ದರು. ಕಾಂಗ್ರೆಸ್ ನಿಂದ ಗೆದ್ದ ಮೊದಲ ಮಹಿಳೆ ಹಾಗೂ ವಿಧಾನಸಭೆ ಪ್ರವೇಶಿಸಿದ ಮಹಿಳೆಯರ ಸಾಲಿಗೆ ಮುಂಚೂಣಿ ಸೇರ್ಪಡೆಯಾಗಿ ಲೀಲಾವತಿ ರೈ ಗಮನ ಸೆಳೆದರು. 1972ರಲ್ಲಿ ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸಿಪಿಐ ಅಭ್ಯರ್ಥಿಯಾಗಿ ಬಿ.ವಿ.ಕಕ್ಕಿಲ್ಲಾಯರು ಗೆದ್ದರು. 1978ರಲ್ಲಿ ಬಂಟ್ವಾಳ ಕ್ಷೇತದಲ್ಲಿ ಕಾಂಗ್ರೆಸ್‌ನ ಬಿ.ಎ.ಮೊಯ್ದೀನ್ ಗೆದ್ದರೆ, ವಿಟ್ಲ ಕ್ಷೇತ್ರದ ಶಾಸಕರಾಗಿ ಬಿ.ವಿ.ಕಕ್ಕಿಲ್ಲಾಯರು (ಸಿಪಿಐ) ಕಾಂಗ್ರೆಸ್ ಬೆಂಬಲದೊಂದಿಗೆ ಆಯ್ಕೆಯಾದರು. 1983ರಲ್ಲಿ ಬಂಟ್ವಾಳ ಮತ್ತು ವಿಟ್ಲ ಕ್ಷೇತ್ರಕ್ಕೆ ಒಂದೇ ಪಕ್ಷದ (ಬಿಜೆಪಿ) ಶಿವರಾವ್ ಮತ್ತು ರುಕ್ಮಯ ಪೂಜಾರಿ ಶಾಸಕರಾದರು. ಆಗ ಅಧಿಕಾರ ಜನತಾ ಪಕ್ಷಕ್ಕಿತ್ತು.1985ರಲ್ಲಿ ರಾಮಕೃಷ್ಣ ಹೆಗಡೆ ಮತ್ತೆ ಮುಖ್ಯಮಂತ್ರಿಯಾದ ಸಂದರ್ಭ ಬಂಟ್ವಾಳ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು. ಬಂಟ್ವಾಳದಿಂದ ಶಾಸಕರಾಗಿ ರಮಾನಾಥ ರೈ ಆಯ್ಕೆಯಾದರೆ, ವಿಟ್ಲಕ್ಕೆ ಉಮರಬ್ಬ ಶಾಸಕರಾದರು.
1989, 1994ರ ಚುನಾವಣೆಯಲ್ಲಿ ಬಂಟ್ವಾಳ ಮತ್ತು ವಿಟ್ಲದಿಂದ ರಮಾನಾಥ ರೈ (ಕಾಂಗ್ರೆಸ್), ರುಕ್ಮಯ ಪೂಜಾರಿ(ಬಿಜೆಪಿ) ಆಯ್ಕೆಯಾದರು. ರಾಜ್ಯದಲ್ಲಿ ಕಾಂಗ್ರೆಸ್, ಜನತಾ ಪಕ್ಷಗಳು ಅಧಿಕಾರ ವಹಿಸಿದ್ದವು. ಈ ಸಂದರ್ಭ 10 ವರ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯ ತಾಲೂಕಿನಲ್ಲಿ ಸಮಬಲದಲ್ಲಿತ್ತು.
ಆದರೆ ಇದನ್ನು ಮುರಿದದ್ದು 1999ರಲ್ಲಿ ವಿಟ್ಲ ಶಾಸಕರಾದ ಕೆ.ಎಂ.ಇಬ್ರಾಹಿಂ. ಅವರು ವಿಟ್ಲಕ್ಕೆ ಬಂಟ್ವಾಳ ಶಾಸಕರಾಗಿ ರೈ ಆಯ್ಕೆಯಾದಾಗ ಮತ್ತೆ ತಾಲೂಕು ಕೈವಶವಾಯಿತು. ಇದೇ ಸಂದರ್ಭ ಆಡಳಿತವೂ ಕಾಂಗ್ರೆಸ್ ಪಕ್ಷಕ್ಕೆ ದೊರಕಿತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು.
2004ರಲ್ಲಿ ಇಡೀ ತಾಲೂಕು ಬಿಜೆಪಿ ವಶವಾಯಿತು. (ನಾಗರಾಜ ಶೆಟ್ಟಿ, ಪದ್ಮನಾಭ ಕೊಟ್ಟಾರಿ). ಆಡಳಿತ ಕಾಂಗ್ರೆಸ್ – ಜೆಡಿಎಸ್, ಹಾಗೂ ಜೆಡಿಎಸ್ – ಬಿಜೆಪಿಗೆ ದೊರಕಿತು. ಕೆಲ ತಿಂಗಳು ನಾಗರಾಜ ಶೆಟ್ಟಿ ಮಂತ್ರಿಯೂ ಆದರು. ಅದೇ ಕೊನೆ. ವಿಟ್ಲ ಕ್ಷೇತ್ರವೆಂಬುದು ಇತಿಹಾಸಕ್ಕೆ ಸೇರಿಹೋಯಿತು. ಬಂಟ್ವಾಳ ಕ್ಷೇತ್ರದ ಬಹುಭಾಗ ಬಂಟ್ವಾಳ ಕ್ಷೇತ್ರಕ್ಕೆ ಬಂತು. ವಿಟ್ಲ ಪೇಟೆ ಸಹಿತ ಕೆಲ ಭಾಗಗಳು ಪುತ್ತೂರು ಕ್ಷೇತ್ರಕ್ಕೆ ಬಂದವು. ಕೆಲವು ಮಂಗಳೂರು ಕ್ಷೇತ್ರಕ್ಕೆ ಸೇರಿಹೋಯಿತು. ಹೀಗಾಗಿ ವಿಟ್ಲ ಕ್ಷೇತ್ರದ ಕೊನೆಯ ಶಾಸಕ ಪದ್ಮನಾಭ ಕೊಟ್ಟಾರಿ.
2008ರ ಚುನಾವಣೆಯಲ್ಲಿ ಬಂಟ್ವಾಳ ರಮಾನಾಥ ರೈ (ಕಾಂಗ್ರೆಸ್), ಪುತ್ತೂರು – ಮಲ್ಲಿಕಾ ಪ್ರಸಾದ್ (ಬಿಜೆಪಿ), ಮಂಗಳೂರು – ಯು.ಟಿ. ಖಾದರ್ (ಕಾಂಗ್ರೆಸ್) ಗೆದ್ದರು. ಈ ಬಾರಿಯೂ ಎರಡೂ ಪಕ್ಷಗಳಿಗೆ ಮತದಾರರು ಅವಕಾಶ ನೀಡಿದರು.
2013ರಲ್ಲಿ ಮತ್ತೆ ಇಡೀ ತಾಲೂಕು ಕಾಂಗ್ರೆಸ್ ವಶವಾಯಿತು. ರೈ, ಖಾದರ್, ಶಕುಂತಳಾ ಶೆಟ್ಟಿ ಗೆದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ಬಂತು. ಕಾಂಗ್ರೆಸ್ ಮತ್ತೆ ಆಧಿಪತ್ಯ ಸ್ಥಾಪಿಸಿತು ಎಂದು ಆ ಪಕ್ಷದ ಬೆಂಬಲಿಗರು ಸಂಭ್ರಮಿಸಿದರು. ಆದರೆ ಐದೇ ವರ್ಷಗಳಲ್ಲಿ ಚುನಾವಣೆ ಬೇರೆಯೇ ಫಲಿತಾಂಶ ತೋರಿಸಿತು.
2018ರಲ್ಲಿ ಬಂಟ್ವಾಳದಿಂದ ರಾಜೇಶ್ ನಾಯ್ಕ್ ಆಯ್ಕೆಯಾದರೆ, ಪುತ್ತೂರಿನಿಂದ ಸಂಜೀವ ಮಠಂದೂರು ಗೆದ್ದರು. ಮಂಗಳೂರಿನಿಂದ ಯು.ಟಿ.ಖಾದರ್ ಗೆದ್ದ ಕಾರಣ ಫರಂಗಿಪೇಟೆ ಕ್ಷೇತ್ರ ವ್ಯಾಪ್ತಿಗೆ ಖಾದರ್ ಒಳಪಡುತ್ತಾರೆ. ಹೀಗೆ ರಾಜೇಶ್ ನಾಯ್ಕ್, ಸಂಜೀವ ಮಠಂದೂರು, ಯು.ಟಿ.ಖಾದರ್ ಈ ಮೂವರು ತಾಲೂಕಿನ ಶಾಸಕರು.
ರೈ ವಿರುದ್ಧ ಎರಡು ಬಾರಿ ಸ್ಪರ್ಧಿಸಿದ್ದ ಶಕುಂತಳಾ: ಈಗಿನ ಕಾಂಗ್ರೆಸ್ ನಾಯಕಿ ಶಕುಂತಳಾ ಶೆಟ್ಟಿ ಬಂಟ್ವಾಳದಲ್ಲಿ ರಮಾನಾಥ ರೈ ವಿರುದ್ಧ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. 1994ರಲ್ಲಿ ರೈ ವಿರುದ್ಧ ಸ್ಪರ್ಧಿಸಿದ್ದ ಶೆಟ್ಟಿ ಅವರಿಗೆ 29734 ಮತ ಲಭಿಸಿದ್ದರೆ, ರೈ ಅವರಿಗೆ 34,027 ಓಟು ದೊರಕಿ ಗೆದ್ದಿದ್ದರು. 1999ರಲ್ಲಿ ರೈ ಅವರಿಗೆ 49905 ಮತ ದೊರಕಿದರೆ, ಶಕುಂತಳಾ ಶೆಟ್ಟರಿಗೆ 36,084 ಮತ ಲಭಿಸಿತ್ತು.
ರೈ ಸೋಲಿಸಿ ಮಂತ್ರಿಯಾದ ಶೆಟ್ರು: 2004ರಲ್ಲಿ ಬಿಜೆಪಿಯ ನಾಗರಾಜ ಶೆಟ್ಟರು 54860 ಮತ ಗಳಿಸಿ ರೈಗಳನ್ನು (48934) ಸೋಲಿಸಿದರು. ಬಳಿಕ ರಚನೆಯಾದ ಬಿಜೆಪಿ ಜೆಡಿಎಸ್ ಸರಕಾರದಲ್ಲಿ ಅವರು ಮಂತ್ರಿಯಾದರು. 2008ರಲ್ಲಿ ರಮಾನಾಥ ರೈಗಳು 61560 ಮತ ಗಳಿಸಿ ನಾಗರಾಜ ಶೆಟ್ಟರನ್ನು (60309) ಮಣಿಸಿ, ಮುಯ್ಯಿ ತೀರಿಸಿಕೊಂಡರು. ಈ ಚುನಾವಣೆಯಲ್ಲಿ ವಿಟ್ಲದಲ್ಲಿ 1999ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಕೆ.ಎಂ.ಇಬ್ರಾಹಿಂ ಜೆಡಿಎಸ್ ನಿಂದ ಸ್ಪರ್ಧಿಸಿ, 6298 ಮತ ಗಳಿಸಿದ್ದು ವಿಶೇಷ.
1967ರಲ್ಲಿ ಬಂಟ್ವಾಳ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ 12 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್, 1 ಸಿಪಿಐ, 3 ಬಾರಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ನಿಂದ ಲೀಲಾವತಿ ರೈ ಹಾಗೂ ಬಿ.ಎ.ಮೊಯ್ದೀನ್ ತಲಾ ಒಂದು ಬಾರಿ ಗೆದ್ದರೆ, ರಮಾನಾಥ ರೈ 6 ಬಾರಿ ವಿಜಯಿಯಾದವರು. ಬಿಜೆಪಿಯಿಂದ ಶಿವರಾವ್, ನಾಗರಾಜ ಶೆಟ್ಟಿ ಮತ್ತು ರಾಜೇಶ್ ನಾಯ್ಕ್ ತಲಾ ಒಂದು ಬಾರಿ ಗೆದ್ದಿದ್ದಾರೆ. ಇವರಲ್ಲಿ ರಮಾನಾಥ ರೈ ಮತ್ತು ನಾಗರಾಜ ಶೆಟ್ಟಿ ಮಂತ್ರಿಯಾದವರು. ಬಂಟ್ವಾಳದಿಂದ ಆಯ್ಕೆದಾದ ಸಂದರ್ಭವಲ್ಲದಿದ್ದರೂ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೊಯ್ದೀನ್ ಮಂತ್ರಿಯಾಗಿದ್ರು.
ಬಿಜೆಪಿಗೆ ಒಲಿದ ಸಂದರ್ಭ: 1983ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಲೆಗೆ ಕಾಂಗ್ರೆಸ್ ಹೊಡೆತ ತಿಂದ ಸಂದರ್ಭ ಬಂಟ್ವಾಳದಲ್ಲೂ ಶಿವರಾವ್ ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿ ಖಾತೆ ತೆರೆದಿತ್ತು. ಬಳಿಕ ರಮಾನಾಥ ರೈ ಶಿವರಾವ್ ಅವರನ್ನು 85ರಲ್ಲಿ ಸೋಲಿಸಿದರು. 2004ರಲ್ಲಿ ಬಿಜೆಪಿಯ ನಾಗರಾಜ ಶೆಟ್ಟಿ ರೈ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದರೆ, 2018ರಲ್ಲಿ ರಾಜೇಶ್ ನಾಯ್ಕ್ ಬಿಜೆಪಿಯಿಂದ ಎರಡನೇ ಬಾರಿ ಸ್ಪರ್ಧಿಸಿ ರೈ ವಿರುದ್ಧ ಗೆದ್ದರು.
Be the first to comment on "ELECTION ROUNDUP: ಬಂಟ್ವಾಳ ತಾಲೂಕು ಒಂದೇ ಪಕ್ಷಕ್ಕೆ ಎಷ್ಟು ಬಾರಿ ಒಲಿದಿತ್ತು?"