ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ – ರಮಾನಾಥ ರೈ ಮೂರನೇ ಮುಖಾಮುಖಿ? – ಓದಿರಿ ELECTION ROUNDUP

www.bantwalnews.com – ವಿಶ್ಲೇಷಣೆ: ಹರೀಶ ಮಾಂಬಾಡಿ

2023ರ ಚುನಾವಣೆ ಘೋಷಣೆ ಆಗದೇ ಇದ್ದರೂ ಭರಾಟೆ ಆರಂಭವಾಗಿದೆ. ಹಾಗೆ ನೋಡಿದರೆ, 2022ರಲ್ಲೇ ಇದಕ್ಕೆ ಪೂರ್ವಭಾವಿ ಕೆಲಸಕಾರ್ಯಗಳು ಆಗುತ್ತಿದ್ದವು. ಪ್ರಬಲ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಆಂತರಿಕವಾಗಿ ಕಾರ್ಯಕರ್ತರ ಪಡೆಯನ್ನು ಸಬಲಗೊಳಿಸುವ ಎಲ್ಲ ಅವಕಾಶಗಳನ್ನು ಕಳೆದುಕೊಂಡಿರಲಿಲ್ಲ. 2018ರ ಚುನಾವಣೆ ಬಳಿಕ ಜೆಡಿಎಸ್ – ಕಾಂಗ್ರೆಸ್ ಆಡಳಿತ ಆರಂಭಿಕ ವರ್ಷ ಇದ್ದಾಗ, ಬಂಟ್ವಾಳದಲ್ಲೂ ಅದರ ಪರಿಣಾಮ  ರಾಜಕೀಯವಾಗಿ ಕಾಣಿಸುತ್ತಿತ್ತು. ಆದರೆ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಮೇಲೆ ಕೇಂದ್ರ, ರಾಜ್ಯಾಡಳಿತ ಎರಡೂ ಬಿಜೆಪಿಯದ್ದೇ ಇರುವ ಕಾರಣ,  ಬಿಜೆಪಿಗೆ ಯೋಜನೆಗಳನ್ನು ಪ್ರಚುರಪಡಿಸುವ ಅವಕಾಶಗಳು ದೊರಕಿದವು. ಈಗ ಎಲೆಕ್ಟ್ರಾನಿಕ್ ಯುಗ. ಮೊಬೈಲ್ ನಲ್ಲೇ ಸಂದೇಶಗಳನ್ನು ಹರಡುವ ಕಾಲ. ತನ್ನ ಅವಧಿಯಲ್ಲಿ ಏನೇನಾಗಿದೆ, ಎದುರಾಳಿ ಹೇಳಿದ್ದೇನು? ಅದಕ್ಕೇನು ಕೌಂಟರ್ ನೀಡುವುದು ಎಂಬುದನ್ನು ಫೊಟೋಶಾಪ್ ಡಿಸೈನ್ ಮೂಲಕ ವಾಟ್ಸಾಪ್/ಫೇಸ್ ಬುಕ್ ಗಳಲ್ಲಿ ಪಸರಿಸುವ ವ್ಯವಸ್ಥೆಗಳೊಂದಿಗೆ, ಮನೆ ಮನೆಗೆ ತೆರಳುವುದು, ಬೂತ್ ಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸುವುದು, ಇಂಥ ಹಲವು ಕಾರ್ಯಗಳನ್ನು ರಾಜಕೀಯ ಪಕ್ಷಗಳು ಬಂಟ್ವಾಳದಲ್ಲೂ ಮಾಡಿವೆ. ಕೆಲವು ಬಹಿರಂಗವಾಗಿ ಕಾಣಿಸಿಕೊಂಡರೆ, ಇನ್ನು ಕೆಲವರು ಅವರ ಪಾಡಿಗೆ ತಮ್ಮ ಬಲವನ್ನು ಗಟ್ಟಿಗೊಳಿಸುವ ಯತ್ನದಲ್ಲಿದ್ದಾರೆ.

ಬಿಜೆಪಿಯಲ್ಲಿ ಇತ್ತೀಚೆಗೆ ನಡೆದ ಪಾದಯಾತ್ರೆಯ ಕೊನೆಯಲ್ಲಿ ರಾಜ್ಯಮಟ್ಟದ ನಾಯಕರು ಆಗಮಿಸಿ ಮಾತನಾಡಿದ್ದು, ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಮತ್ತೊಮ್ಮೆ ಚುನಾವಣೆ ಎದುರಿಸಲು ಪೂರ್ಣ ವೇದಿಕೆ ನಿರ್ಮಿಸಿದಂತಾಗಿದೆ, ಕಾಂಗ್ರೆಸ್ ನಲ್ಲಿ ರಮಾನಾಥ ರೈ ಅವರೇ ಅಭ್ಯರ್ಥಿ ಎಂದು ನಾಯಕರು ಖಚಿತವಾಗಿ ಹೇಳುತ್ತಿದ್ದಾರೆ. ಸಕ್ರಿಯವಾಗಿಯೇ ಕ್ಷೇತ್ರದಾದ್ಯಂತ ಓಡಾಡುತ್ತಿರುವ ರೈ, ಕಾರ್ಯಕರ್ತರ ಸಭೆಯಲ್ಲಷ್ಟೇ ಅಲ್ಲ, ಸಾರ್ವಜನಿಕ ಸಮಾರಂಭಗಳು, ದೇವಸ್ಥಾನ, ಜಾತ್ರೆ, ಬ್ರಹ್ಮಕಲಶೋತ್ಸವ, ನಾಟಕೋತ್ಸವ, ಯಕ್ಷಗಾನ ಸಹಿತ ವಿವಿಧ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಮೂಲಕ ಮತದಾರರ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ, ಹೀಗಾಗಿ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಕೈ ನಾಯಕರ ಮಾತು.

ಎಸ್.ಡಿ.ಪಿ.ಐ. ಈ ಬಾರಿ ಜನವರಿಯಲ್ಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿ, ಬಹಿರಂಗ ಸಭೆಗಳನ್ನು ಮಾಡಿದೆ. ಇಲಿಯಾಸ್ ಮಹಮ್ಮದ್ ತುಂಬೆ ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಆ ಪಕ್ಷವೇ ಹೇಳಿದೆ. ಹೀಗಾಗಿ ಮೂರು ಪಕ್ಷಗಳು ಬಂಟ್ವಾಳ ವಿಧಾನಸಭೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿಯುವುದು ಖಚಿತ. ಸದ್ಯದ ಮಾಹಿತಿ ಪ್ರಕಾರ, ಶಾಸಕ ರಾಜೇಶ್ ನಾಯ್ಕ್ ಬಿಜೆಪಿಯಿಂದ ಮತ್ತೊಮ್ಮೆ ಕಣಕ್ಕಿಳಿದರೆ, ಮಾಜಿ ಸಚಿವ ಬಿ.ರಮಾನಾಥ ರೈ ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿಯುವರು. ಹೀಗಾದರೆ, ಇದು ರಾಜೇಶ್ ನಾಯ್ಕ್ ಮತ್ತು ರಮಾನಾಥ ರೈ ಮಧ್ಯೆ ಮೂರನೇ ಚುನಾವಣಾ ಸಮರ. ಅವರ ಎರಡು ಚುನಾವಣಾ ಮುಖಾಮುಖಿಯಲ್ಲಿ ಓಟು  ಯಾರು ಎಷ್ಟು ಪಡೆದಿದ್ದರು?

ರಮಾನಾಥ ರೈ ಮೊದಲ ಸೋಲು ಕಂಡಿದ್ದು ನಾಗರಾಜ ಶೆಟ್ಟರ ವಿರುದ್ಧ. ಮರು ಚುನಾವಣೆಯಲ್ಲೇ ಶೆಟ್ಟರನ್ನು ಸೋಲಿಸುವ ಮೂಲಕ ತಿರುಗೇಟು ನೀಡಿದ್ದರು. ಅದಾಗಿ ಮತ್ತೊಂದು ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ವಿರುದ್ಧ ಗೆದ್ದರು. ಮತ್ತೊಮ್ಮೆ ರಾಜೇಶ್ ನಾಯ್ಕ್ ರೈಗಳನ್ನು ಸೋಲಿಸುವ ಮೂಲಕ ತಿರುಗೇಟು ನೀಡಿದರು. ಇದೀಗ ರಾಜೇಶ್ ನಾಯ್ಕ್ ಮತ್ತು ರೈ ಮಧ್ಯೆ ಮೂರನೇ ಬಾರಿ ಫೈಟ್. (ಟಿಕೆಟ್ ಅಧಿಕೃತ ಘೋಷಣೆ ಆಗಿಲ್ಲ). ಹೇಗಿತ್ತು ನಾಲ್ಕು ಚುನಾವಣೆಯ ಲೆಕ್ಕಾಚಾರ?

2004ರಲ್ಲಿ ನಾಗರಾಜ ಶೆಟ್ಟಿ ಅವರು ರಮಾನಾಥ ರೈ ಅವರನ್ನು ಸೋಲಿಸಿದಾಗ ಶೆಟ್ಟರಿಗೆ 54,860 ಮತಗಳು ರೈ ಅವರಿಗೆ 48,934 ಮತಗಳು ದೊರಕಿದ್ದವು. ಬಳಿಕ 2008ರಲ್ಲಿ ರೈ ಅವರು ನಾಗರಾಜ ಶೆಟ್ಟರನ್ನು ಸೋಲಿಸಿದಾಗ, ರೈ ಅವರಿಗೆ 61,560 ಮತಗಳು ದೊರಕಿದ್ದರೆ, 60,309 ಮತಗಳು ದೊರಕಿದವು. ರಮಾನಾಥ ರೈ ಅವರು 2008ರಲ್ಲಿ ಮತ್ತೆ ಗೆದ್ದಾಗ ಕೇವಲ ಒಂದೂವರೆ ಸಾವಿರದಷ್ಟು ಸಣ್ಣ ಅಂತರದ ಫೊಟೋ ಫಿನಿಶ್ ಫಲಿತಾಂಶದಲ್ಲಾಗಿರುವುದು ಈಗ ಇತಿಹಾಸ. 2013ರಲ್ಲಿ ರಾಜೇಶ್ ನಾಯ್ಕ್ ಮೊದಲ ಬಾರಿ ಚುನಾವಣಾ ಕಣಕ್ಕಿಳಿದಾಗ, ರಮಾನಾಥ ರೈ ಅವರಿಗೆ 81,665 ಮತಗಳು, ರಾಜೇಶ್ ನಾಯ್ಕ್ ಅವರಿಗೆ 63,805 ಮತಗಳು ದೊರಕಿದ್ದವು. ರಾಜೇಶ್ ನಾಯ್ಕ್ ವಿರುದ್ಧ ರೈ ಗೆದ್ದಿದ್ದರು. ಮಂತ್ರಿಯೂ ಆದರು. ಬಳಿಕ 2018ರಲ್ಲಿ ರಾಜೇಶ್ ನಾಯ್ಕ್ ಅವರಿಗೆ 97,802 ಮತಗಳು, ರಮಾನಾಥ ರೈ ಅವರಿಗೆ 81,831 ಮತಗಳು ದೊರಕಿದವು. ಮೊದಲ ಬಾರಿ ನಾಯ್ಕ್ ಶಾಸಕರಾದರು. 2023ರ ಚುನಾವಣೆ ಡಿಕ್ಲೇರ್ ಇನ್ನೂ ಆಗಬೇಕಷ್ಟೇ. ಅಂದ ಹಾಗೆ 2018ರ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಪಾರ ಬೆಂಬಲಿಗರೊಂದಿಗೆ ಚುನಾವಣಾ ನಾಮಪತ್ರ ಸಲ್ಲಿಸಿದ್ದಲ್ಲದೇ, ನಾಮಪತ್ರ ಹಿಂತೆಗೆದು ಕುತೂಹಲ ಮೂಡಿಸಿದ್ದರು. ಎಸ್.ಡಿ.ಪಿ.ಐ. ಈಗ ನಾವು ಕಣದಲ್ಲಿರುತ್ತೇವೆ, ಸ್ಪರ್ಧೆ ನೀಡುತ್ತೇವೆ ಎಂದು ಹೇಳುತ್ತಿದೆ. ಅಲ್ಲಲ್ಲಿ ಅಭ್ಯರ್ಥಿ ಇಲ್ಯಾಸ್ ತುಂಬೆ ಕಟೌಟ್ ಗಳು ಕಂಡುಬರುತ್ತಿದೆ. ಹೊಸ ಮತದಾರರು, ಹಳೇ ಮತದಾರರೊಂದಿಗೆ ಹಲವು ಲೆಕ್ಕಾಚಾರಗಳು ಈ ಚುನಾವಣೆಯಲ್ಲಿ ನಡೆಯುತ್ತಿವೆ. ಕೌಂಟ್ ಡೌನ್ ಶುರುವಾಗಿದೆ. ಇವತ್ತಿನಂತೆ ನಾಳೆ ಇರುವುದಿಲ್ಲ. ರಾಜ್ಯ ರಾಜಕೀಯದ ಬೆಳವಣಿಗೆಗಳೂ ಕ್ಷಣ ಕ್ಷಣಕ್ಕೆ ಬದಲಾಗುತ್ತಿವೆ. ಹೇಳಿಕೆ, ಪ್ರತಿಹೇಳಿಕೆಗಳ ಸುರಿಮಳೆಯಾಗುತ್ತಿದೆ. ಇನ್ನು ನಿಮ್ಮ ಮನೆಬಾಗಿಲಿಗೆ ರಾಜಕಾರಣಿಗಳು ಬರುವುದು ಹಳೇ ಮಾತು!!…ಎಲ್ಲವೂ ನಿಮ್ಮ ಮೊಬೈಲ್ ಗೆ ಬೇಕೋ, ಬೇಡವೋ ರಾಶಿ ರಾಶಿ ಡಿಸೈನುಗಳು, ಸ್ಲೋಗನ್ ಗಳು ಬರುತ್ತವೆ. ಚುನಾವಣಾ ರಣತಂತ್ರಗಳ ವೈಖರಿಯೂ ಬದಲಾಗಿದೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ – ರಮಾನಾಥ ರೈ ಮೂರನೇ ಮುಖಾಮುಖಿ? – ಓದಿರಿ ELECTION ROUNDUP"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*