ಹಿಂದೆ ಬಂಟ್ವಾಳದಲ್ಲಿ ನಿರಂತರ ಕೋಮುಹಿಂಸೆ, ಸೆಕ್ಷನ್ ಹಾಕುವ ಸನ್ನಿವೇಶವಿತ್ತು. ಆಗ ಜನಸಾಮಾನ್ಯರು ಇದರಿಂದ ತೊಂದರೆ ಅನುಭವಿಸಿದ್ದರು, ಅದು 1.0 ಯುಗವಾದರೆ, ಈಗ ನಡೆಯುತ್ತಿರುವುದು 2.0 ಅಭಿವೃದ್ಧಿಯ ಯುಗ, ಶಾಸಕ ರಾಜೇಶ್ ನಾಯ್ಕ್ ಗ್ರಾಮವಿಕಾಸ ಯಾತ್ರೆ ಮೂಲಕ ರಿಪೋರ್ಟ್ ಕಾರ್ಡ್ ನೀಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಹೇಳಿದರು. ಬಂಟ್ವಾಳ ಬಸ್ತಿಪಡ್ಪುವಿನ ಮೈದಾನದಲ್ಲಿ ಶನಿವಾರ ಸಂಜೆ ಜನವರಿ 14ರಂದು ಪೊಳಲಿಯಿಂದ ಆರಂಭಗೊಂಡ ಬಂಟ್ವಾಳ ಬಿಜೆಪಿ ನೇತೃತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪಾದಯಾತ್ರೆ ಗ್ರಾಮವಿಕಾಸ ಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಏನೇನು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆಯೋ ಅದನ್ನೇ ರಾಜ್ಯದಲ್ಲಿ ಮುಂದುವರಿಸುತ್ತಿದ್ದು, ಅಲ್ಲಿ ನೀಡಿದ ಘೋಷಣೆಗಳಲ್ಲಿ ಯಾವುದನ್ನೂ ಅನುಷ್ಠಾನ ಮಾಡಿಲ್ಲ, ಎಂದು ಎಚ್ಚರಿಸಿದರು. ಕಾಂಗ್ರೆಸ್ ಅಧಿಕಾರಕ್ಕಾಗಿ ಹವಣಿಸುತ್ತಿದ್ದು, ಅವಾಸ್ತವಿಕ ಭರವಸೆಗಳ ಮೂಲಕ ಜನರ ಗಮನ ಸೆಳೆಯುತ್ತಿದೆ, ಆದರೆ ಅದರ ಅಗೋಚರ ಅಜೆಂಡಾಗಳ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.

ರಾಮ ಮಂದಿರ ವಿರೋಧಿಗಳು ನಕಲಿ ಹಿಂದುಗಳು ಎಂದು ಈ ಸಂದರ್ಭ ಹೇಳಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಕ್ಕಳ ಮನಸ್ಸಿನಲ್ಲಿ ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮಾಡಿತ್ತು. ಕರೆಂಟಿಲ್ಲ ಎಂದು ಕೇಳಿದವರನ್ನು ಬಂಧಿಸಿದವರು 200 ಯೂನಿಟ್ ಕರೆಂಟ್ ಫ್ರೀ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ಇತ್ತೀಚೆಗೆ ಪ್ರಜಾಧ್ವನಿ ಸಮಾವೇಶ ಬಿಜೆಪಿ ಬಯ್ಯುವ ಯಾತ್ರೆ ಆಗಿತ್ತು. ಮೋದಿ ಅವರನ್ನು ಬೈಯುವ ಕೆಲಸ ಮಾಡಿದ್ದರು ಎಂದು ಸಿ.ಟಿ.ರವಿ ಹೇಳಿದರು.
ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಪಕ್ಷದ ಕಾರ್ಯಕರ್ತರ ಪ್ರತಿಫಲವಾಗಿ ತಾನು ಶಾಸಕನಾಗಿ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಯಿತು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು, ಯಾತ್ರೆ ಸಂಚಾಲಕ ದೇವದಾಸ ಶೆಟ್ಟಿ, ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ ಮತ್ತು ಕಸ್ತೂರಿ ಪಂಜ, ಜಿಲ್ಲಾ ಮಾಧ್ಯಮ ಪ್ರಮುಖರಾದ ಸಂದೇಶ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ ಉಪಸ್ಥಿತರಿದ್ದರು. ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಬಿ.ಸಿ.ರೋಡ್ ಕೈಕಂಬದಿಂದ ಸಭಾ ಕಾರ್ಯಕ್ರಮದ ವೇದಿಕೆವರೆಗೆ ನಡೆದ ಬೃಹತ್ ಮೆರವಣಿಗೆಯಲ್ಲಿ ತೆರೆದ ಜೀಪಿನಲ್ಲಿ ಅಣ್ಣಾಮಲೈ ಸಹಿತ ಅತಿಥಿಗಳು ಆಗಮಿಸಿದರು. ಈ ಸಂದರ್ಭ ಫ್ಲೈಓವರ್ ಮೇಲಿಂದ ಪುಷ್ಪವೃಷ್ಟಿ, ಎತ್ತರದ ಕ್ರೇನ್ ನಿಂದ ಮಾಲಾರ್ಪಣೆ ಕಾರ್ಯಕ್ರಮ ಗಮನ ಸೆಳೆಯಿತು.
Be the first to comment on "ಅಭಿವೃದ್ಧಿಗೆ ದಕ್ಷಿಣ ಕನ್ನಡ ಮಾಡೆಲ್: ಬಂಟ್ವಾಳದಲ್ಲೀಗ 2.0ರ ಯುಗ: ಗ್ರಾಮವಿಕಾಸ ಯಾತ್ರೆ ಸಮಾರೋಪದಲ್ಲಿ ಅಣ್ಣಾಮಲೈ"