ಬಂಟ್ವಾಳ ತಾಲೂಕು ಮಟ್ಟದ ಗಣರಾಜ್ಯೋತ್ಸವ ಸಮಾರಂಭವು ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು. ತಹಸೀಲ್ದಾರ್ ದಯಾನಂದ್ ಅವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ, ಅಖಂಡ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಜತೆಯಾಗಿ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮಾತನಾಡಿ, ಬಂಟ್ವಾಳದಲ್ಲಿ ಹೊಸದಾಗಿ ಮಾಜಿ ಸೈನಿಕರ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ತಮ್ಮ ಬೇಡಿಕೆಯಂತೆ ಸಂಘದ ನಿವೇಶನಕ್ಕೆ ಪ್ರಯತ್ನಿಸಲಾಗುವುದು. ಯುವಜನರಲ್ಲಿ ದೇಶಭಕ್ತಿ ಬೆಳೆಯಲು ನಿಮ್ಮ ಮಾರ್ಗದರ್ಶನ ಅತಿ ಅಗತ್ಯವಾಗಿದೆ. ಅಂಬೇಡ್ಕರ್ ಅವರ ಆದರ್ಶದಿಂದ ಯುವ ಜನತೆ ತಮ್ಮ ಭವಿಷ್ಯ ರೂಪಿಸಬೇಕಿದೆ ಎಂದರು.
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಂಜುನಾಥ್ ರೇವಣ್ಕರ್ ಉಪನ್ಯಾಸ ನೀಡಿ ಸಂವಿಧಾನವೇ ದೇಶದ ಜೀವಾಳವಾಗಿದ್ದು, ಇದರ ಪರಿಣಾಮವಾಗಿಯೇ ದೇಶ ವಿಶ್ವಮಾನ್ಯವಾಗುತ್ತಿದೆ ಎಂದರು.
ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಟ್, ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಂಕಪ್ಪ ಉಪಸ್ಥಿತರಿದ್ದರು. ಎಸೆಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ತಾಲೂಕಿನ ಸರಕಾರಿ ಶಾಲೆಗಳ ನಾಲ್ವರು ವಿದ್ಯಾರ್ಥಿಗಳಿಗೆ ಲಾಪ್‌ಟಾಪ್ ವಿತರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಸರಕಾರಿ ಯೋಜನೆ ತಲುಪಿತ್ತಿರುವ ಗ್ರಾಮವನ್ ಕೇಂದ್ರದಲ್ಲಿ ಉತ್ತಮ ಸೇವೆ ನೀಡಿದ ಮೂವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಸಂಯೋಜಕಿ ಸುಜಾತಕುಮಾರಿ ವಿದ್ಯಾರ್ಥಿಗಳ ವಿವರ ನೀಡಿದರು. ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು ಗಾಮ ವನ್ ಸಾಧಕರ ವಿವರ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ.ಸ್ವಾಗತಿಸಿದರು. ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Be the first to comment on "ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಗಣರಾಜ್ಯೋತ್ಸವ"