ಮಾಣಿ ಮಠ ಸಪರಿವಾರ ರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧರ್ಮಸಭೆ

ಮಾಣಿ: ದುಂದುವೆಚ್ಚಕ್ಕೆ ಕಡಿವಾಣ ಹಾಕಿಕೊಂಡು, ಸರಳ ಜೀವನ ಅಳವಡಿಸಿಕೊಂಡು ಸಮಾಜದ ಶಾಶ್ವತ ಕಾರ್ಯಗಳಿಗೆ ಧರ್ಮಕಾರ್ಯಗಳಿಗೆ ಕೊಡುಗೆ ನೀಡುವ ಮೂಲಕ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಮಾಣಿ ಮಠದಲ್ಲಿ ನೂತನ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.

ಶ್ರೀ ರಾಮಚಂದ್ರಾಪುರ ಮಠ ಪೆರಾಜೆಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿಯವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆಶಿರ್ವಾದ ಪಡೆದರು.ಶ್ರೀ ಮಠವನ್ನು ಸಂಪರ್ಕಿಸುವ ರಸ್ತೆಯನ್ನು ರೂ 2 ಕೋಟಿ 75 ಲಕ್ಷ ಅನುದಾನದಲ್ಲಿ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದ್ದು ಪೂಜ್ಯ ಶ್ರೀಗಳ ದಿವ್ಯಹಸ್ತದಿಂದ ಲೋಕಾರ್ಪಣೆಗೊಂಡಿತು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತದ ಕುಟುಂಬ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿ. ಭಾರತದ ವಿಶೇಷತೆ ಅಡಗಿರುವುದು, ನಮ್ಮ ಸನಾತನ ಹಿಂದೂ ಧರ್ಮ ಉಳಿದುಕೊಂಡಿರುವುದು ಈ ಕುಟುಂಬ ವ್ಯವಸ್ಥೆಯಿಂದಾಗಿ.ಬ್ರಿಟಿಷ್, ಮೊಘಲರ ಶಿಕ್ಷಣದ ಫಲವಾಗಿ ನಮ್ಮ ಶಿಕ್ಷಣದಲ್ಲಿ ಭಾರತೀಯತೆ ಮರೆತು ಹೋದ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆ ಪರಿವರ್ತನೆಗೆ ಗೋಕರ್ಣದಲ್ಲಿ ಶ್ರೀರಾಮಚಂದ್ರಾಪುರ ಮಠ ನಿರ್ಮಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಇಡೀ ದೇಶಕ್ಕೇ ಮಾದರಿ. ಸನಾತನ ಹಿಂದೂ ಧರ್ಮದ ರಕ್ಷಣೆಯಲ್ಲಿ ದೊಡ್ಡ ಹೆಜ್ಜೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೂಡಾ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದು ವಿವರಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಭರತಭೂಮಿಯ ಜತೆಗೆ ವಿಶೇಷ ನಂಟು ಹೊಂದಿರುವ ಪ್ರತಿಯೊಬ್ಬರೂ ಹಿಂದೂಗಳು ಎಂದು ವಿಶ್ಲೇಷಿಸಿದರು.

ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, “ಶಂಕರಾಚಾರ್ಯರು ನಿರ್ಮಿಸಿದ ಇತಿಹಾಸವನ್ನು ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಮತ್ತೆ ಸೃಷ್ಟಿಸುತ್ತಿದ್ದಾರೆ. ಭಕ್ತಿಯ ಅದ್ಭುತ ಶ್ರದ್ಧಾಕೇಂದ್ರವಾಗಿ ಮಾಣಿ ಮಠ ಬೆಳೆದಿದೆ ಎಂದರು.
ದೇವಾಲಯವನ್ನು ಸ್ವಾಯತ್ತಗೊಳಿಸುವುದು ಕೈಗಾರಿಕೆಗಳನ್ನು ಸ್ವಾಯತ್ತಗೊಳಿಸಿದಷ್ಟು ಸುಲಭವಲ್ಲ. ಈ ಬಗ್ಗೆ ಅವಲೋಕನ, ಚರ್ಚೆಗಳು ನಡೆಯುತ್ತಿವೆ. ಅಯೋಧ್ಯೆ ಮಂದಿರ, ಕಾಶಿ ಕಾರಿಡಾರ್, ಕಾಶ್ಮೀರದಲ್ಲಿ ಶಂಕರಾಚಾರ್ಯರ ಮಂದಿನ ಪುನರ್ ನಿರ್ಮಾಣವಾಗಿದೆ. ರಾಜ್ಯದಲ್ಲೂ ಸಂಪೂರ್ಣ ಬಹುಮತ ಬಂದ ತಕ್ಷಣ ದೇವಾಲಯ ಸ್ವಾಯತ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ಭರವಸೆ ನೀಡಿದರು.

ಕಳೆದ ಮೂರು ದಶಕಗಳಲ್ಲಿ ಮಾಣಿ ಮಠದಲ್ಲಿ ಅದ್ಭುತ ಬದಲಾವಣೆಗಳು ಆಗಿವೆ. ಇಡೀ ಸಮಾಜದ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಶ್ರೀಮಠ ರೂಪುಗೊಂಡಿದೆ. ಧರ್ಮರಕ್ಷಣೆಯ ನಿಟ್ಟಿನಲ್ಲಿ ಇಡೀ ಸಮಾಜ ಒಗ್ಗೂಡಬೇಕು. ಇದಕ್ಕೆ ಮಠಮಾನ್ಯಗಳು ಮಾರ್ಗದರ್ಶನ ನೀಡಬೇಕು ಎಂದು ಸಚಿವ ಎಸ್.ಅಂಗಾರ ಮನವಿ ಮಾಡಿದರು. ಶ್ರೀರಾಮನ ಆದರ್ಶ ನಮಗೆಲ್ಲರಿಗೆ ಮಾದರಿ ಎಂದು ಶಾಸಕ ಸಂಜೀವ ಮಠಂದೂರು ಅಭಿಪ್ರಾಯಪಟ್ಟರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮುಕ್ತೇಸರ ವಾಸುದೇವ ಅಸ್ರಣ್ಣ ಮಾತನಾಡಿ, ಹಿಂದೂ ಧರ್ಮವನ್ನು ಸಂಘಟಿತವಾಗಿ ಮುಂದೆ ಕೊಂಡೊಯ್ಯುವಲ್ಲಿ ರಾಘವೇಶ್ವರ ಶ್ರೀಗಳ ಪಾತ್ರ ಪ್ರಮುಖವಾದದ್ದು ಎಂದು ಬಣ್ಣಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಭಟ್, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಹೆಗಡೆ, ಶ್ರೀಕ್ಷೇತ್ರ ಗೋಕರ್ಣದ ತಂತ್ರಿಗಳಾದ ವೇದಮೂರ್ತಿ ಶ್ರೀ ಅಮೃತೇಶ ಭಟ್ ಹಿರೇ, ವಾಸ್ತು ತಜ್ಞ ಮಹೇಶ್ ಮುನಿಯಂಗಳ, ಕುಂಟಾರು ರವೀಶ್ ತಂತ್ರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ, ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ, ಪುತ್ತೂರು ನಗರಸಭಾಧ್ಯಕ್ಷ ಜೀವಂದರ್ ಜೈನ್ ಉಪಸ್ಥಿತರಿದ್ದರು.

ಯಕ್ಷಧ್ರುವ ಪ್ರತಿಷ್ಠಾನದ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಆಶಯಗೀತೆ ಪ್ರಸ್ತುತಪಡಿಸಿದರು. ಮಾಣಿಮಠ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಮಾಣಿಮಠದ ಸಮಿತಿ ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್, ಕೋಶಾಧಿಕಾರಿ ಮೈಕೆ ಗಣೇಶ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಂಡಲ ಗುರಿಕ್ಕಾರರಾದ ಉದಯಕುಮಾರ್ ಖಂಡಿಗ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಮೂರು ಮಂಡಲಗಳ ಅಧ್ಯಕ್ಷರಾದ ಪರಮೇಶ್ವರ ಭಟ್, ಗಣೇಶಮೋಹನ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮೂಲೆ ಭಾಗವಹಿಸಿದ್ದರು. ದೇಗುಲ ಶಿಲ್ಪವನ್ನು ನಿರ್ಮಿಸಿಕೊಟ್ಟ ಕೃಷ್ಣ ಶಿಲ್ಪಿ ಹಾಗೂ ವಾಸ್ತುತಜ್ಞ ಮಹೇಶ್ ಮುನಿಯಂಗಳ ಅವರನ್ನು ಸನ್ಮಾನಿಸಲಾಯಿತು. ಬಂಗಾರಡ್ಕ ಜನಾರ್ದನ ಭಟ್ ವಂದಿಸಿದರು. ಡಾ.ಗೌತಮ ಕುಳಮರ್ವ ಅಭಿವೃದ್ಧಿಪಡಿಸಿದ ದಾನಧಾರ ಯೋಜನೆಯನ್ನು ಈ ಸಂದರ್ಭ ಸಮರ್ಪಿಸಲಾಯಿತು. ಆಂಜನೇಯ ಪೂಜಾ ವಿಧಿ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಾಣಿ ಮಠ ಸಪರಿವಾರ ರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧರ್ಮಸಭೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*