ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಭಾರತ ವಿಶ್ವದೆಲ್ಲೆಡೆ ಮನ್ನಣೆ ಪಡೆದಿದೆ. ದೇಶದ ಜನರ ಸುರಕ್ಷತೆಗೆ ಗರಿಷ್ಠ ಒತ್ತು ನೀಡುವುದರ ಮೂಲಕ ಗೌರವ ಕಾಪಾಡುವ ಕೆಲಸವನ್ನು ಮಾಡಲಾಗಿದೆ. ಇಂದು ನಾನಾ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕೇಂದ್ರ, ರಾಜ್ಯ ಸರಕಾರಗಳು ಜನರಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಜನಪ್ರತಿನಿಧಿಗಳು ತಲೆತಗ್ಗಿಸಿಕೊಂಡು ಓಟು ಕೇಳುವ ಪರಿಸ್ಥಿತಿ ಬಿಜೆಪಿ ಮಾಡಿಲ್ಲ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿಜೆಪಿ ಬಂಟ್ವಾಳ ನೇತೃತ್ವದಲ್ಲಿ ನಡೆಸುತ್ತಿರುವ ಗ್ರಾಮವಿಕಾಸ ಯಾತ್ರೆ ಗ್ರಾಮದೆಡೆಗೆ ಶಾಸಕರ ನಡಿಗೆ ಕಾರ್ಯಕ್ರಮದ ಎಂಟನೇ ದಿನದ ಸಮಾರೋಪ ಪಾಂಡವರಕಲ್ಲು ಎಂಬಲ್ಲಿ ಶನಿವಾರ ರಾತ್ರಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಯಾಸದಲ್ಲಿ ನಾವು ಸರಕಾರವನ್ನು ರಚಿಸಿದ್ದೇವೆ. ಕಾಂಗ್ರೆಸ್ ನವರದ್ದೆ ಸರಕಾರ ಇದ್ದಾಗ, ಅವರದ್ದೇ ಕೇಂದ್ರ, ರಾಜ್ಯ ಸರಕಾರ ಇದ್ದಾಗ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರ ಬಂದ ಬಳಿಕ ನೀಡಿದ ಭರವಸೆಗಳೆಲ್ಲ ಈಡೇರಿವೆ ಎಂದರು.
ದೇಶದ ಹಿತಕಾಯುವ ರಕ್ಷಣಾಪಡೆಗಳಿಗೆ ಸ್ಥೈರ್ಯ ನೀಡಿ, ಮನೋಬಲವನ್ನು ವೃದ್ದಿಸುವ ಕಾರ್ಯವನ್ನು ನಮ್ಮ ಸರಕಾರ ಮಾಡುತ್ತಿದೆ. ಕೇಂದ್ರದ ಹಲವು ಯೋಜನೆಗಳಿಂದ ಜನರು ಸ್ವಾಭಿಮಾನದಿಂದ ಬದುಕುವಂತಾಗಿದ್ದು, ಕಾಂಗ್ರೆಸ್ ಸರಕಾರ ಅವಕಾಶವಿದ್ದಾಗಲೂ ಮಾಡದ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡುತ್ತಿವೆ ಎಂದರು.ಮೂರು ಕೋಟಿ ಬಾಂಗ್ಲಾ ದೇಶೀಯರು ನುಸುಳಿದವರಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದ್ದುದನ್ನು ನಮ್ಮ ಸರಕಾರ ಕಡಿವಾಣ ಹಾಕಿದೆ, ದೇಶದ ಗಡಿ ಗುರುತು ಮಾಡಲಾಗಿದೆ, ಜನರ ಹಿತ ಕಾಯುವ ಕೆಲಸ ಮಾಡಲಾಗಿದೆ ಎಂದರು.
ಎನ್.ಐ.ಎ ರೈಡ್ ಮಾಡಿದಾಗ ಸಿಕ್ಕವರು ಪಾಕಿಸ್ತಾನದಲ್ಲಿ ತರಬೇತಿಯಾದವರು. ಇವರೆಲ್ಲ ಆಲ್ ಖೈದಾದಂಥ ಸಂಘಟನೆ ಸಂಪರ್ಕ ಇರುವಂಥವರು ಎಂದರು.
ಸಿದ್ದರಾಮಯ್ಯ ಕೇವಲ ಒಂದು ಜಾತಿಗಷ್ಟೇ ಅನುದಾನ ನೀಡಿದ್ದರೆ, ಬಿಜೆಪಿ ಎಲ್ಲರ ಹಿತ ಕಾಯುತ್ತಿವೆ ಎಂದರು.ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಎಲ್ಲರ ಪ್ರೀತಿ ವಿಶ್ವಾಸದೊಂದಿಗೆ ಕೆಲಸ ಮಾಡಲು ಸಾಧ್ಯವಾಯಿತು ಎಂದರು.,
ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಬಂಟ್ವಾಳ ಕ್ಷೇತ್ರದಲ್ಲಿ ಕೃಷಿಕರಿಗೆ ಕಾಯಕಲ್ಪ ನೀಡುವ ಶಾಸಕ ರಾಜೇಶ್ ನಾಯ್ಕ್ ಉತ್ತಮ ಕೆಲಸ ಮಾಡುತ್ತಿದ್ದಾರೆ, ಪಶ್ಚಿಮವಾಹಿನಿ ಯೋಜನೆ ಮೂಲಕ ಕೃಷಿಕರಿಗೆ ನೆರವಾಗುತ್ತಿದ್ದಾರೆ ಎಂದರು. ನಳಿನ್ ಕುಮಾರ್ ಕಟೀಲ್ ಆಶೀರ್ವಾದ ಮೂಲಕ ರಸ್ತೆ ಅಭಿವೃದ್ಧಿ ಆಗುತ್ತಿದೆ, ಶಾಸಕ ರಾಜೇಶ್ ನಾಯ್ಕ್ ಮೂಲಕ ಪುಂಜಾಲಕಟ್ಟೆ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ. ತನ್ನ ಕೈಯಿಂದಲೇ ಹಣ ಖರ್ಚು ಮಾಡಿ ನೆರವಾಗುವ ಶಾಸಕರಾಗಿದ್ದಾರೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದರು. ಯಾತ್ರೆ ಸಂಚಾಲಕ ಬಿ.ದೇವದಾಸ ಶೆಟ್ಟಿ, ಸಹಸಂಚಾಲಕರಾದ ಸುದರ್ಶನ ಬಜ, ರಾಜ್ಯ ನೀರು ಸರಬರಾಜು ಒಳಚರಂಡಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಜಿಪಂ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ನಾವೂರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಚಿದಾನಂದ ರೈ, ಉಳಿ ಗ್ರಾಪಂ ಅಧ್ಯಕ್ಷ ಸುರೇಶ್ ಮೈರ ಉಪಸ್ಥಿತರಿದ್ದರು. ದೇವದಾಸ್ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಿಜೆಪಿಯಿಂದ ಅಭಿವೃದ್ಧಿಪರ್ವ, ಸಾಧನೆಯನ್ನು ಮುಂದಿಟ್ಟು ಜನರ ಬಳಿಗೆ ತೆರಳುವ ಹೆಮ್ಮೆ ನಮಗಿದೆ – ಶೋಭಾ ಕರಂದ್ಲಾಜೆ"