ಬಂಟ್ವಾಳ: ಮಂಚಿ ಕುಕ್ಕಾಜೆಯ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಡಿ.24ರಿಂದ 26ರವರೆಗೆ ಪ್ರತಿದಿನ ಸಂಜೆ 4ರಿಂದ ಸಂಸ್ಕೃತಿ ಉತ್ಸವ ಎಂಬ ಕಾರ್ಯಕ್ರಮವನ್ನು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ) ಮಂಚಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಏರ್ಪಡಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ.
ಡಿ.24ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮವನ್ನು ಮಂಚಿಮಾಡ ಅರಸು ಕುರಿಯಡ್ತಾಯ ಮೂವರು ದೈವಂಗಳು ಆಡಳಿತ ಮೊಕ್ತೇಸರ ಪತ್ತುಮುಡಿ ಜಗದೀಶ ರಾವ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಪುಷ್ಪಾ ಕಾಮತ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಭಾಗವಹಿಸುವರು. ಈ ಸಂದರ್ಭ ಹವ್ಯಾಸಿ ಯಕ್ಷಗಾನ ಕಲಾವಿದ ಪುಷ್ಪರಾಜ್ ಕುಕ್ಕಾಜೆ ಮತ್ತು ರಂಗನಟ, ಪ್ರಸಾದನ ಕಲಾವಿದ ಶಿವಶಂಕರ ರಾವ್ ಮಂಚಿ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಸೀತಾ ಪರಿತ್ಯಾಗ ತಾಳಮದ್ದಳೆಯನ್ನು ಮೋಹನ ರಾವ್ ಮತ್ತು ಬಳಗ ನಡೆಸಿಕೊಡಲಿದ್ದು, ಕಲಾವಿದರಾಗಿ ಗಿರೀಶ್ ಮುಳಿಯಾಲ, ಪದ್ಯಾಣ ಶಂಕರನಾರಾಯಣ ಭಟ್, ಮುರಲೀಧರ ಕಲ್ಲೂರಾಯ, ಕೆ.ಮೋಹನ ರಾವ್, ಕೆ.ಸಂಕಪ್ಪ ಶೆಟ್ಟಿ, ದಿನೇಶ್ ಶೆಟ್ಟಿ ಅಳಿಕೆ ಭಾಗವಹಿಸುವರು.
ಡಿ.25ರಂದು ಸಂಜೆ ರಂಗವಿನ್ಯಾಸಕರಾದ ಮೂರ್ತಿ ದೇರಾಜೆ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಅಜಿತ್ ಕುಮಾರ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದಿ.ಡಾ. ಕಜೆ ಮಹಾಬಲ ಭಟ್ ಸ್ಮರಣಾರ್ಥ ತುಳುನಾಡಿನ ಭೌತಿಕ ಸಂಸ್ಕೃತಿ ಕುರಿತು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ವಿಶೇಷ ಉಪನ್ಯಾಸ ನೀಡುವರು. ಬಳಿಕ ಸಂಗೀತ ಕಾರ್ಯಕ್ರಮ ಇರಲಿದ್ದು, ಡಾ.ಎಂ.ಚಕ್ರಪಾಣಿ (ಕೊಳಲು), ಶ್ರೀರಾಮಚಂದ್ರ ಭಟ್ (ಬಾನ್ಸುರಿ), ಪ್ರಸನ್ನ ಎನ್.ಭಟ್ ಬಲ್ನಾಡು (ಮೃದಂಗ), ಭಾರವಿ ದೇರಾಜೆ (ತಬ್ಲ), ಡಾ. ಸುಧನ್ಯ ಉಪಾಧ್ಯ (ವಯೋಲಿನ್) ಕಾರ್ಯಕ್ರಮ ನೀಡುವರು.
26ರಂದು ಸೋಮವಾರ ಸಮಾರೋಪ ನಡೆಯಲಿದ್ದು, ಅನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ನೂಜಿಬೈಲು ನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಲಯನ್ ಮಾಜಿ ರಾಜ್ಯಪಾಲ ಕೆ. ದೇವದಾಸ ಭಂಡಾರಿ, ಪತ್ರಕರ್ತ ಹರೀಶ ಮಾಂಬಾಡಿ ಭಾಗವಹಿಸಲಿದ್ದು, ಈ ವೇಳೆ ಹರಿಕಥಾ ಕೀರ್ತನೆಕಾರರಾದ ಮಂಜುಳಾ ಗುರುರಾಜ್ ಮತ್ತು ಗಮಕ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಗುವುದು. ಬಳಿಕ ನಂದಗೋಕುಲ ತಂಡದಿಂದ ಶ್ವೇತಾ ಅರೆಹೊಳೆ ಅಭಿನಯದಲ್ಲಿ ಏಕವ್ಯಕ್ತಿ ನಾಟಕ ಗೆಲ್ಲಿಸಬೇಕು ಅವಳ ಪ್ರದರ್ಶನಗೊಳ್ಳಲಿದೆ.
Be the first to comment on "ಮಂಚಿ ಕುಕ್ಕಾಜೆಯಲ್ಲಿ ಡಿ.24ರಿಂದ 26ರವರೆಗೆ ಸಂಸ್ಕೃತಿ ಉತ್ಸವ"