ಬಂಟ್ವಾಳ: ಇಬ್ಬರು ಸಚಿವರಿದ್ದರೂ ರಾಜ್ಯದಲ್ಲಿ ಸುಮಾರು 70 ಲಕ್ಷ ಜನಸಂಖ್ಯೆ ಇರುವ ಬಿಲ್ಲವ, ಈಡಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಜನವರಿ 6ರಿಂದ ಮಂಗಳೂರಿನಿಂದ ಆರಂಭಿಸಿ ಬೆಂಗಳೂರಿನವರೆಗೆ 658 ಕಿ.ಮೀ. ಪಾದಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳಕ್ಕೆ ಶನಿವಾರ ಆಗಮಿಸಿ, ಶ್ರೀ ನಾರಾಯಣಗುರು ಮಂದಿರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಿಂದ ಆರಂಭಗೊಳ್ಳುವ ಪಾದಯಾತ್ರೆಗೆ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದು, ವಿವಿಧ ರಾಜ್ಯಗಳ ಗಣ್ಯರು ಆಗಮಿಸಲಿದ್ದಾರೆ. ಯಾತ್ರೆ ಸಿಗಂದೂರು ಸಹಿತ ವಿವಿಧ ಕಡೆಗಳಿಗೆ ತೆರಳಿ ಬೆಂಗಳೂರು ತಲುಪಲಿದೆ ಎಂದರು.
ಬಿಲ್ಲವ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ, ಎರಡು ಸಚಿವರಿದ್ದರೂ ಸಮುದಾಯಕ್ಕೆ ಏನೂ ಲಾಭವಿಲ್ಲ. ಬ್ರಹ್ಮಶ್ರೀ ನಾರಾಯಣಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮ ಘೋಷಣೆ ಮಾಡಿ 500 ಕೋಟಿ ರೂಗಳನ್ನು ಮೀಸಲಿರಿಸಬೇಕು. ಬಿಲ್ಲವ ಸಮುದಾಯದ ಓಟು ಬೇಕು, ಕೋಟಾ ಬೇಕು ಆದರೆ ಸಮುದಾಯ ಬೇಡ ಎನ್ನುವ ಧೋರಣೆ ಸಲ್ಲದು ಎಂದರು.
2023ರ ಚುನಾವಣೆಯಲ್ಲಿ ಮತದ ಲೆಕ್ಕದಲ್ಲಿ ಪ್ರಾತಿನಿಧ್ಯ ಬೇಕು ಎಂದ ಅವರು, ರಾಜಕೀಯ ಕುತಂತ್ರಗಳು, ರಾಜಕೀಯ ಷಡ್ಯಂತ್ರಗಳಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು. ಈ ಸಂದರ್ಭ ಅವರು ಗುರುಮಂದಿರದಲ್ಲಿ ಪ್ರಸಾದ ಸ್ವೀಕರಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಜಿತೇಂದ್ರ ಸುವರ್ಣ, ಬಂಟ್ವಾಳ ಬಿಲ್ಲವ ಸಮಾಜದ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಬಿಲ್ಲವ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ"