ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಬಂಟ್ವಾಳ ಆಡಳಿತ ಸೌಧದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು. ಈ ಸಂದರ್ಭ ಮನವಿ ಸಲ್ಲಿಸಿದ ಜಿಪಂ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಅಕ್ರಮ ಸಕ್ರಮ ಕಮಿಟಿಯಲ್ಲಿ ಕಡತಗಳನ್ನು ಇಡದೆ, ಅರ್ಜಿಯನ್ನೂ ಸಲ್ಲಿಸದೆ ಜಾಗ ಮಂಜೂರಾಗಿರುವ ಪ್ರಕರಣಗಳ ಕುರಿತು ಗಮನ ಸೆಳೆದರು. ಈ ಸಂದರ್ಭ, ಪರಿಶೀಲನೆ ನಡೆಸಲು ತಹಸೀಲ್ದಾರ್ ಡಾ. ಸ್ಮಿತಾ ರಾಮು ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಪೂರಕವಾಗಿ ಕಡತಗಳು ಇಲ್ಲದೆ ಡಿನೋಟಿಸ್ ನೀಡಿದ್ದರೆ ಅವುಗಳ ತನಿಖೆ ನಡೆಸಬೇಕು ಎಂದರು.
ಜಿಲ್ಲಾಧಿಕಾರಿಗಳಿಗೆ ಈ ಸಂದರ್ಭ ಹಲವು ಮನವಿಗಳನ್ನು ನೀಡಲಾಯಿತು. ಎಲ್ಲ ಮನವಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಪ್ರತಿಯೊಂದನ್ನೂ ತಮ್ಮದೇ ವೈಯಕ್ತಿಕ ಅರ್ಜಿ ಎಂದು ಪರಿಗಣಿಸಿ, ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ, ಪುಂಜಾಲಕಟ್ಟೆ ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭ ಭೂಮಿಯನ್ನು ಕಳೆದುಕೊಂಡವರಿಗೆ ಪರಿಹಾರ ದೊರಕದ ವಿಚಾರ, ಜಾಗ ತಕರಾರು ಸಮಸ್ಯೆಗಳ ಕುರಿತು ಮನವಿಗಳು ಬಂದವು, ಬಂಟ್ವಾಳದ ಅನಧಿಕೃತ ಕಟ್ಟಡಗಳು ಮೆಲ್ಕಾರ್ ನಲ್ಲಿ ಇನ್ನೂ ತೆರವುಗೊಳಿಸದ ಕಟ್ಟಡಗಳ ಕುರಿತು ಮನವಿ ಸಲ್ಲಿಸಲಾಯಿತು. ತುಂಬೆ ಪದವಿ ಕಾಲೇಜು ಬಳಿ ಕೆಎಸ್ಸಾರ್ಟಿಸಿ ವೇಗದೂತ ಹಾಗೂ ಹೆಚ್ಚಿನ ಶೆಟ್ಲ್ ಬಸ್ ನಿಲುಗಡೆಗೊಳಿಸಲು ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಅಬ್ದುಲ್ ಕಬೀರ್, ಜಗದೀಶ್ ರೈ, ಮೋಲಿ ಎಡ್ನಾ ಗೊನ್ಸಾಲ್ವಿಸ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ವ್ಯವಸ್ಥೆ ಕಲ್ಪಿಸಲು ಡಿಸಿ ಮಂಗಳೂರಿನ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಗ್ರಾಮದಲ್ಲಿ ಹೆಚ್ಚುವರಿ ಭೂಮಿಯನ್ನು ಸಂಬಂಧಪಟ್ಟ ಎಸ್ಸಿಎಸ್ಟಿಯವರಿಗೆ ಶೇ.50ರಷ್ಟು ಜಾಗವನ್ನು ನೀಡುವಂತೆ ಎಸ್ಸಿಎಸ್ಟಿ ಮುಖಂಡರ ನಿಯೋಗಕ್ಕೆ ತಿಳಿಸಿದರು. ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು, ಉಪತಹಸೀಲ್ದಾರ್ ಗಳಾದ ನವೀನ್ ಬೆಂಜನಪದವು, ನರೇಂದ್ರನಾಥ ಮಿತ್ತೂರು, ದಿವಾಕರ ಮುಗುಳ್ಯ, ಕಂದಾಯ ನಿರೀಕ್ಷಕರಾದ ಜನಾರ್ದನ, ವಿಜಯ್, ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ್ ಸಾಲಿಯಾನ್, ಪುರಸಭೆ ಮುಖ್ಯಾಧಿಕಾರಿ ಎ.ಆರ್.ಸ್ವಾಮಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Be the first to comment on "ಬಂಟ್ವಾಳದಲ್ಲಿ ಜಿಲ್ಲಾಧಿಕಾರಿ ಅಹವಾಲು ಸ್ವೀಕಾರ: ಅಕ್ರಮ ಸಕ್ರಮ ಕಮಿಟಿಯಲ್ಲಿ ಅರ್ಜಿ ಸಲ್ಲಿಸದೆ, ಕಡತಗಳು ಇಲ್ಲದೆ ಜಾಗ ಮಂಜೂರು ಪ್ರಕರಣಗಳ ಪರಿಶೀಲನೆಗೆ ಸೂಚನೆ"