ಬಂಟ್ವಾಳ: ದ.ಕ. ಜಿಲ್ಲೆ ಬಂಟ್ವಾಳ ತಾಲೂಕು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ನಂದಾವರದಲ್ಲಿ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನಕ್ಕೆ ತೆರಳಲು 9.75 ಕೋಟಿ ರೂ ವೆಚ್ಚದಲ್ಲಿ ನೂತನ ಸೇತುವೆ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಮುಂದಾಳತ್ವದಲ್ಲಿ ನಂದಾವರ ಸನ್ನಿಧಿಯಲ್ಲಿ ಚೌತಿಯ ದಿನವಾದ ಬುಧವಾರ ಬೆಳಗ್ಗೆ ನಡೆಯಿತು.
ನಂದಾವರದಲ್ಲಿ ಸೇತುವೆ ಅಭಿವೃದ್ಧಿ ಕಾಮಗಾರಿಯು ಲೋಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಜಿಲ್ಲಾ ಮತ್ತು ಇತರ ರಸ್ತೆಗಳು ಸುಧಾರಣೆಗಳಡಿ 9.75 ಕೋಟಿ ರೂ. ಮೊತ್ತಕ್ಕೆ ಅನುಮೋದನೆಯಾಗಿದೆ ಎಂದು ಈ ಸಂದರ್ಭ ತಿಳಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪವಿತ್ರ ಯಾತ್ರಾಸ್ಥಳವಾಗಿರುವ ನಂದಾವರಕ್ಕೆ ಪಾಣೆಮಂಗಳೂರು ಪೇಟೆಯ ಮೂಲಕ ಈಗ ತೆರಳುವ ರಸ್ತೆ ಕಿರಿದಾಗಿರುವ ಕಾರಣ, ಪರ್ಯಾಯ ರಸ್ತೆ ಅವಶ್ಯಕತೆ ಹಿನ್ನೆಲೆಯಲ್ಲಿ ಪಾಣೆಮಂಗಳೂರು ಪೇಟೆಯಿಂದ ಕವಲೊಡೆದು, ನಂದಾವರಕ್ಕೆ ತಲುಪಲು ನೇತ್ರಾವತಿ ನದಿಯ ತಟದಲ್ಲೇ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಭವಿಷ್ಯದಲ್ಲಿ ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ಬೆಳೆಯುವ ನಂದಾವರ ಕ್ಷೇತ್ರಕ್ಕೆ ತೆರಳುವ ಈ ರಸ್ತೆಯಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದರು. ಇದೀಗ ಸೇತುವೆಗೆ ಶಂಕುಸ್ಥಾಪನೆ ನಡೆದಿದ್ದು, ಮುಂದೆ ಅಗತ್ಯವಿರುವ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಶಾಸಕರು ಈ ಸಂದರ್ಭ ತಿಳಿಸಿದರು.
ಈ ಸಂದರ್ಭ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಭಕ್ತರಿಗೆ ದೇವಸ್ಥಾನ ತಲುಪಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಇದರಿಂದ ದೇವರ ಸನ್ನಿಧಿ ತಲುಪುವ ಹಾದಿ ಸುಗಮವಾಗಲಿದೆ ಎಂದು ಶುಭ ಹಾರೈಸಿದರು.
ಈ ರಸ್ತೆಯಲ್ಲಿ 75 ಮೀಟರ್ ಉದ್ದ ಹಾಗೂ 8.5 ಮೀ. ಅಗಲಕ್ಕೆ ಆರ್.ಸಿ.ಸಿ. ಗಿರ್ಡರ್, ಡೆಕ್ ಸ್ಲ್ಯಾಬ್ ಸೇತುವೆಯನ್ನು 2 ಅಬಟ್ಮೆಂಟ್, 2 ಪಿಯರ್ ಮತ್ತು 3 ಸ್ಪಾನ್ ಗಳನ್ನು ಅಳವಡಿಸಿ ಮಧ್ಯಮ ಪಥ ಸೇತುವೆ ನಿರ್ಮಿಸಲು 9.75 ಕೋಟಿ ರೂ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಅದರಂತೆ ಕಾಮಗಾರಿ ನಡೆಯಲಿದೆ ಎಂದು ಈ ಸಂದರ್ಭ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಯಪ್ರಕಾಶ್ ತಿಳಿಸಿದರು.
ಸಜಿಪ ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್ ಶಂಕುಸ್ಥಾಪನೆಯ ಧಾರ್ಮಿಕ ವಿಧಿ ನೆರವೇರಿಸಿದರೆ, ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಪ್ರಧಾನ ಅರ್ಚಕ ವೇ.ಮೂ.ಮಹೇಶ ಭಟ್ ನೆರವೇರಿಸಿದರು.
ಈ ಸಂದರ್ಭ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ನಂದಾವರ ಕ್ಷೇತ್ರದ ಕಾರ್ಯನಿರ್ವಹಾಧಿಕಾರಿ ಜಯಮ್ಮ, ನಂದಾವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ಶ್ರೀಕಾಂತ್ ಶೆಟ್ಟಿ, ಪ್ರವೀಣ್ ಗಟ್ಟಿ, ಸುದರ್ಶನ ಬಜ, ಯಶವಂತ ನಗ್ರಿ, ಪಾಂಡುರಂಗ ಪ್ರಭು, ದಿನೇಶ್ ಅಮ್ಟೂರು, ಗಣೇಶ್ ರೈ ಮಾಣಿ, ಜಯಶಂಕರ ಬಾಸ್ರಿತ್ತಾಯ, ಲೋಹಿತ್ ಪಣೋಲಿಬೈಲ್, ರೂಪೇಶ್ ಆಚಾರ್ಯ, ಸತೀಶ್ ಗೌಡ, ಸಂದೀಪ್, ರಂಜಿತ್ ಮೈರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರುಣ ಕುಮಾರ್, ಮೋಹನದಾಸ್ ಹೆಗ್ಡೆ, ಗಣೇಶ್ ಕಾರಾಜೆ, ಯಶವಂತ ದೇರಾಜೆ, ಕವಿತಾ ವಸಂತ ಪೆರಾಜೆ, ಜಯ ಅಶೋಕ್, ದೇವಪ್ಪ ನಾಯ್ಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಅಮೃತ ಕುಮಾರ್, ವ್ಯವಸ್ಥಾಪನಾ, ಜೀರ್ಣೋದ್ಧಾರ ಸಮಿತಿ ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು.
Be the first to comment on "9.75 ಕೋಟಿ ರೂಗಳ ವೆಚ್ಚದಲ್ಲಿ ನಂದಾವರ ದೇವಸ್ಥಾನ ಸಂಪರ್ಕ ಸೇತುವೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಅವರಿಂದ ಶಂಕುಸ್ಥಾಪನೆ"