ಸೋಮವಾರ ರಾತ್ರಿಯಿಂದೀಚೆಗೆ ವಿಟ್ಲದ ನೆಕ್ಕರೆಕಾಡು ಎಂಬಲ್ಲಿ ಮಾನವ ತಲೆಬುರುಡೆ, ಬಟ್ಟೆ, ಎಲುಬು ಪತ್ತೆಯಾದ ವಿಚಾರ ಸ್ಥಳೀಯರಲ್ಲಿ ಮಂಗಳವಾರವಿಡೀ ಆತಂಕಕ್ಕೆ ಕಾರಣವಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸರು ಅದು ಸ್ಥಳೀಯ ನಾಗೇಶ್ ಎಂಬವರದ್ದು ಎಂದು ಪತ್ತೆಹಚ್ಚಿದರು.
ನೆಕ್ಕರೆಕಾಡಿನ ಸಮೀಪ ಗುಡ್ಡೆಯೊಂದರಲ್ಲಿ ಮನುಷ್ಯನ ತಲೆಬುರುಡೆ, ಎಲುಬು ಮತ್ತು ಬಟ್ಟೆ ಚೂರುಗಳು ಪತ್ತೆಯಾಗಿದ್ದು, ಇದು ಯಾವುದೋ ಒಬ್ಬ ವ್ಯಕ್ತಿಯದ್ದು ಇರಬಹುದು ಎಂದು ಸಂಶಯಿಸಲಾಗಿತ್ತು. ಸೋಮವಾರ ಸಂಜೆ ವೇಳೆ ಕಟ್ಟಿಗೆ ತರಲು ಗುಡ್ಡಕ್ಕೆ ಹೋದವರಿಗೆ ಇದು ಕಂಡುಬಂತ್ತು. ಜೊತೆಗೆ ಸ್ಥಳದಲ್ಲಿ ವ್ಯಕ್ತಿಯೊಬ್ಬರ ಪಂಚೆ, ಶರ್ಟ್ ಕೂಡ ಪತ್ತೆಯಾಗಿದ್ದು, ತಲೆ ಬುರುಡೆ, ಎಲುಬಿಗೂ ಸಂಬಂಧವಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಯಿತು. ಈ ಕುರಿತು ಮಂಗಳವಾರ ತೀವ್ರ ತನಿಖೆ ನಡೆಸಿದ ವಿಟ್ಲ ಪೊಲೀಸರು, ಮೃತ ವ್ಯಕ್ತಿಯನ್ನು ಉಕ್ಕುಡ ಕಾಂತಡ್ಕ ನಿವಾಸಿ ನಾಗೇಶ್ ಗೌಡ(65) ಎಂದು ಮನೆಯವರ ಸಹಾಯದಿಂದ ಗುರುತಿಸಿದರು. ನಾಗೇಶ್ ಗೌಡ 6 ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Be the first to comment on "ಆತಂಕಕ್ಕೆ ಕಾರಣವಾದ ಮಾನವ ತಲೆಬುರುಡೆ, ವಿಟ್ಲ ಪೊಲೀಸ್ ತನಿಖೆಯಿಂದ ಗುರುತು ಪತ್ತೆ"