ಕೊಡಗಿನ ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಕಾಡಾನೆ ಲಗ್ಗೆಯಿಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆ ಅಣೆಕಟ್ಟೆ ವ್ಯಾಪ್ತಿಯ ಉದ್ಯಾನವನದೊಳಗೆ ಅಡ್ಡಾಡಿದೆ.
ಸಂಗೀತ ಕಾರಂಜಿ ಪ್ರದರ್ಶನ ಸಂದರ್ಭ ಆಗಮಿಸಿದ ಕಾಡಾನೆ ಕಂಡು ಪ್ರವಾಸಿಗರು ಬೆರಗಾಗಿದ್ದು, ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ.
ಕೂಡಲೇ ಕಾರಂಜಿ ನಿಲ್ಲಿಸಿ ಪ್ರೇಕ್ಷಕರನ್ನು ಹೊರಗೆ ಸುರಕ್ಷಿತವಾಗಿ ಪೊಲೀಸರು ಕಳುಹಿಸಿದ್ದಾರೆ. ಹಾರಂಗಿ ಅಣೆಕಟ್ಟು ಭದ್ರತೆಗೆ ನಿಯೋಜಿಸಿರುವ ಆಂತರಿಕ ಭದ್ರತಾ ವಿಭಾಗದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಪೊಲೀಸರು ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಮತ್ತು ಅವರ ಸಿಬ್ಬಂದಿ ಕಾಡಾನೆಯನ್ನು ಕಾಡಿಗೆ ಅಟ್ಟಿದರು. ಇತ್ತೀಚೆಗೆ ಸಂಗೀತ ಕಾರಂಜಿ ಜನಪ್ರಿಯ ಆಗಿತ್ತು.ಹಾರಂಗಿ ಗ್ರಾಮದ ಕಿರು ಸೇತುವೆ ಬಳಿಯ ಕಾವೇರಿ ದೇವಾಲಯ ಮುಂಭಾಗ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಗೇಟ್ ಒಂದನ್ನು ಒದ್ದು ಹೊರಕ್ಕೆ ಬಂದ ಕಾಡಾನೆ ಗ್ರಾಮದೊಳಗಿನಿಂದ ಹಾದು ಸಮೀಪದ ದೊಡ್ಡತ್ತೂರು ಅರಣ್ಯ ಪ್ರದೇಶದತ್ತ ತೆರಳಿದೆ ಎನ್ನಲಾಗಿದೆ.
Be the first to comment on "ಹಾರಂಗಿ ಜಲಾಶಯದ ಸಂಗೀತ ಕಾರಂಜಿ ನೋಡಲು ಬಂದ ಕಾಡಾನೆ, ಪ್ರವಾಸಿಗರು ಕಂಗಾಲು"