ಬಂಟ್ವಾಳದ ಎಎಸ್ಪಿ ಶಿವಾಂಶು ರಜಪೂತ್ ವರ್ಗಾವಣೆಗೆ ಮರಳು, ಜೂಜಿನಂಥ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಹೊರಟಿದ್ದೇ ಕಾರಣ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ. ಇದಕ್ಕೆಲ್ಲ ರಾಜಕೀಯ ಪ್ರೇರಣೆಯೇ ಕಾರಣ ಎಂದು ಆರೋಪಿಸಿರುವ ಅವರು, ಬಂಟ್ವಾಳ ಮತ್ತು ಬೆಳ್ತಂಗಡಿ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಅಕ್ರಮ ದಂಧೆ ನಡೆಯುತ್ತಿದೆ ಎಂದು ಪುನರುಚ್ಛರಿಸಿದ್ದಾರೆ. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಡಳಿತ ಪಕ್ಷದ ರಾಜಕೀಯ ಪ್ರೇರಣೆ ಇದಕ್ಕೆಲ್ಲ ಕಾರಣ ಎಂದು ಆಡಳಿತ ಪಕ್ಷದ ವಿರುದ್ಧ ಅವರು ಗಂಭೀರ ಆಪಾದನೆ ಮಾಡಿದ್ದಾರೆ.
ಒಳ್ಳೆಯ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ಹಠಾತ್ತಾಗಿ ವರ್ಗಾವಣೆ ಮಾಡಿದ್ದಾರೆ, ನಿರಂತರವಾಗಿ ಅಕ್ರಮ ಮರಳುಗಾರಿಕೆ ಬಂಟ್ವಾಳ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಅನಂತಾಡಿಯಲ್ಲಿ ಗಣಿಗಾರಿಕೆಯಿಂದ ಗುಹಾತೀರ್ಥಕ್ಕೆ ತೊಂದರೆ ಆಗುತ್ತಿದೆ ಎಂಬ ಆರೋಪವನ್ನು ಮಾಡಿ ಪ್ರತಿಭಟನೆಯನ್ನು ಮಾಡಿದ್ದೆವು ಎಂದು ರೈ ನೆನಪಿಸಿದರು. ಜೂಜು ಅಡ್ಡೆಯ ಬಳಿಯೇ ಹಲ್ಲೆ ಪ್ರಕರಣ, ವರದಿಯಾಗಿವೆ. ಹೆಣ್ಣುಮಕ್ಕಳ ಕರಿಮಣಿ ಅಡವಿಟ್ಟು ಜುಗಾರಿ ದಂಧೆಯಲ್ಲಿ ತೊಡಗಿಸಿಕೊಂಡವರಿದ್ದಾರೆ ಎಂದು ರೈ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಆಲಿ ಬೋಳಂತೂರು, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮುರಳೀಧರ ರೈ ಮಠಂತಬೆಟ್ಟು, ಪ್ರಸಾದ್ ಕೌಶಲ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಮಾನಾಥ ರೈ, ಮಹಮ್ಮದ್ ಬಡಗನ್ನೂರು, ಪದ್ಮನಾಭ ರೈ ಉಪಸ್ಥಿತರಿದ್ದರು.
Be the first to comment on "ಮರಳು, ಜೂಜು ಅಕ್ರಮ ದಂಧೆಗೆ ಕಡಿವಾಣ ಹಾಕಲು ಹೊರಟಿದ್ದಕ್ಕೆ ಎಎಸ್ಪಿ ಟ್ರಾನ್ಸ್ಫರ್ – ರಮಾನಾಥ ರೈ ಆರೋಪ"