ಸೌಹಾರ್ದತೆ ಮತ್ತು ಮಾನವೀಯ ಮೌಲ್ಯದ ಬದುಕನ್ನು ಪ್ರತಿ ಬಿಂಬಿಸುವ ವರದಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಬ್ರ‍್ಯಾಂಡ್ ಮಂಗಳೂರು ಪ್ರಶಸ್ತಿಯನ್ನು ಜುಲೈ 1ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಅವರಿಗೆ ಪ್ರದಾನ ಮಾಡಲಾಯಿತು.
ತನಗೆ ದೊರಕಿರುವ ಪ್ರಶಸ್ತಿ ಹಳ್ಳಿಗೆ ಸಂದ ಮಾನ. ಹಳ್ಳಿಗಳಲ್ಲಿ ಇಂದಿಗೂ ಮಾನವೀಯ ಮೌಲ್ಯ, ಸೌಹಾರ್ದತೆ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು, ಆ ನಿಟ್ಟಿನಲ್ಲಿ ಬರೆಯಲ್ಪಟ್ಟ ಲೇಖನಕ್ಕೆ ಈ ಗೌರವ ಸಂದಿರುವುದು ಸಂತಸ ನೀಡಿದೆ ಎಂದು ನಾ. ಕಾರಂತ ಪೆರಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಧಾ ಪತ್ರಿಕೆಯಲ್ಲಿ 2021ರ ಆಗಸ್ಟ್ 11ರಂದು ರಂದು ಪ್ರಕಟಗೊಂಡ ನಾ ಕಾರಂತರ “ಗಾಂಧಿ ಭಾರತ- ಗ್ರಾಮ ಭಾರತ ಎಂಬ ವರದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯು ರೂ. 5001 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಶ್ಮಿ ಎಸ್.ಆರ್. “ಬ್ರ್ಯಾಂಡ್ ಮಂಗಳೂರು” ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕಾ ಮಾಧ್ಯಮ ಹಾಗೂ ಪತ್ರಕರ್ತರ ಪಾತ್ರ ಪ್ರಮುಖ ಏನೇ ಬದಲಾವಣೆಯಾದರೂ ಪತ್ರಕರ್ತರು ಸತ್ಯದ ಪರವಾಗಿ ವರದಿ ಮಾಡಿ ಜನರಿಗೆ ನೈಜ ವಿಷಯಗಳನ್ನು ತಿಳಿಸಿದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ವಿಜಯಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಅವರು ಕೋವಿಡ್ ನಂತರ ಮಾಧ್ಯಮದ ಸ್ಥಿತ್ಯಂತರ ಕುರಿತು ಉಪನ್ಯಾಸ ನೀಡಿದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಬಿ.ಎನ್. ವಂದಿಸಿದರು
ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಅವರು ನೆಲದ ನಾಡಿ, ತಳಿ ತಪಸ್ವಿ, ಕಾಡು ಮಾವು ಸಹಿತ 20 ಕೃಷಿ ಕೃತಿಗಳು, ಶೇಣಿ ಚಿಂತನ, ಅಮರಾವತಿ ಸಹಿತ 15 ಯಕ್ಷಗಾನದ ಕೃತಿಗಳು, 11 ಸಂಪಾದಿತ ಕೃತಿಗಳು, ಇತರ 3 ಕೃತಿಗಳನ್ನು ರಚಿಸಿದ್ದಾರೆ. ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪ್ರಶಸ್ತಿ, ಮುರಘಾಶ್ರೀ ಪ್ರಶಸ್ತಿ, ಪಗೋ ಪ್ರಶಸ್ತಿ ಸಹಿತ ಹತ್ತಕ್ಕೂ ಹೆಚ್ಚು ಪ್ರಶಸ್ತಿ ಲಭಿಸಿದೆ. ಪದ್ಮಶ್ರೀ ಹರೇಕಳ ಹಾಜಬ್ಬರ ಬಗೆಗಿನ ‘ಅಕ್ಷರ ಯೋಗಿಯ ನೋಡಲ್ಲಿ’ ಲೇಖನವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್‌ನ ಕನ್ನಡ ಪಠ್ಯದಲ್ಲಿ ಸೇರಿತ್ತು. ಎರಡು ಕೃಷಿ ಸಂಬಂಧಿಸಿದ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆಗೊಂಡಿದೆ.
Be the first to comment on "ನಾ.ಕಾರಂತ ಪೆರಾಜೆ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ"