ಪುಂಜಾಲಕಟ್ಟೆ: ಅಕ್ರಮವಾಗಿ ದನಗಳನ್ನು ಕದ್ದೊಯ್ಯುತ್ತಿರುವ ಪ್ರಕರಣವೊಂದನ್ನು ಪುಂಜಾಲಕಟ್ಟೆ ಪೊಲೀಸ್ ಎಸ್.ಐ. ಸುತೇಶ್ ಮತ್ತವರ ತಂಡ ಭಾನುವಾರ ಬೆಳಗ್ಗೆ ಪತ್ತೆಹಚ್ಚಿದ್ದು, ಬೆನ್ನಟ್ಟಿದ ಸಂದರ್ಭ ಆರೋಪಿಗಳು ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದಾಗಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆ 4.30ರ ಸುಮಾರಿಗೆ ಘಟನೆ ನಡೆದಿದೆ. ಪುಂಜಾಲಕಟ್ಟೆ ಪೊಲೀಸ್ ಎಸ್.ಐ. ಸುತೇಶ್ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ವಾಮದಪದವು ಕಡೆಯಿಂದ ಕುದ್ಕೋಳಿ ಕಡೆಗೆ ವಾಹನವೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯಂತೆ, ಸಿಬ್ಬಂದಿ ನವೀನ್, ಪ್ರಭಾಕರ್ ಜೊತೆ ಕುಕ್ಕಿಪ್ಪಾಡಿ ಗ್ರಾಮದ ಎಲ್ಬೇಲು ತಲುಪಿ ಬೀದಿ ದೀಪದಡಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ, ಬೆಳಗ್ಗೆ ಸುಮಾರು 4.15ರ ವೇಳೆ ವಾಮದಪದವು ಕಡೆಯಿಂದ ಕುದ್ಕೋಳಿ ಕಡೆಗೆ ಟಾಟಾ ಇಂಟ್ರಾ ವಿ10 ಗೂಡ್ಸ್ ಮಿನಿ ಟೆಂಪೋ ಅತೀ ವೇಗವಾಗಿ ಬರುತ್ತಿದ್ದುದ್ದನ್ನು ಕಂಡು ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರು. ಈ ಸಂದರ್ಭವಾಹನವನ್ನು ನಿಲ್ಲಿಸದೇ ಮುಂದೆ ಹೋಗಿದ್ದು, ಕೂಡಲೇ ಎಸ್.ಐ. ಸಿಬ್ಬಂದಿರ ಜೊತೆ ಇಲಾಖಾ ಜೀಪಿನಲ್ಲಿ, ವಾಹನವನ್ನು ಬೆನ್ನಟ್ಟಿ ಕುದ್ಕೋಳಿ ಜಂಕ್ಷನ್ ಎಂಬಲ್ಲಿ ತಡೆದು ನಿಲ್ಲಿಸಿದ್ದು, ಆರೋಪಿಗಳು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದಾಗ ಎಸ್.ಐ. ಹಾಗೂ ಸಿಬ್ಬಂದಿಯವರು ಜೀಪಿನಿಂದ ಇಳಿದು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ, ಆರೋಪಿಗಳು ಪೊಲೀಸರನ್ನು ದೂಡಿ ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ಆರೋಪಿಗಳು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕವಾಗಿ ಎಲ್ಲಿಂದಲೋ ಕದ್ದು ತಂದ ಸುಮಾರು 4 ಅಡಿ ಎತ್ತರದ ಕ್ರೀಮ್ ಬಣ್ಣದ ದನ ಹಾಗೂ ಸುಮಾರು ಮೂರುವರೆ ಅಡಿ ಎತ್ತರದ ಕ್ರೀಮ್ ಬಣ್ಣದ ಮತ್ತೊಂದು ದನ ಹಾಗೂ ಸುಮಾರು ಮೂರುವರೆ ಅಡಿ ಎತ್ತರದ ಬೂದು ಬಣ್ಣದ ದನ ಹೀಗೆ ಮೂರು ದನಗಳನ್ನು ವಧೆ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆಹಚ್ಚಲಾಗಿದೆ. ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಕ್ರಮ ಜರುಗಿಸಿದ್ದು, ಸ್ವಾಧೀನಪಡಿಸಿಕೊಂಡ ದನಗಳ ಮೌಲ್ಯ ಸುಮಾರು 20 ಸಾವಿರ ರೂ, ವಾಹನದ ಅಂದಾಜು ಮೌಲ್ಯ 6 ಲಕ್ಷ ರೂ ಹಾಗೂ ಅದರೊಳಗಿದ್ದ 2 ಮೊಐಲ್ ಸೇರಿ ಒಟ್ಟು 6,40,000 ರೂ ಮೊತ್ತದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 1964 & ಕಲಂ: 11(1)(ಡಿ) ಪ್ರಾಣಿ ಹಿಂಸೆ ತಡೆ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ ಕಾಯ್ದೆ 1960 & ಕಲಂ: 66 ಜೊತೆಗೆ 192(ಎ) ಐ ಎಂ ವಿ ಕಾಯ್ದೆ & ಕಲಂ: 41(1)(ಡಿ) ಜೊತೆಗೆ 102 ಸಿಆರ್‌ಪಿಸಿ ಮತ್ತು 379, 186, 353, 323 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.
ಹಿಂಜಾವೇ ಅಭಿನಂದನೆ: ಪುಂಜಾಲಕಟ್ಟೆ ಎಸ್ ಐ ಸುತೇಶ್ ಕರ್ತವ್ಯನಿಷ್ಠೆ ಗೆ ಹಿಂದು ಜಾಗರಣೆ ವೇದಿಕೆ ಬಂಟ್ವಾಳ ವತಿಯಿಂದ ಮೆಚ್ಚುಗೆಯೊಂದಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದು ಪ್ರಮುಖರಾದ ತಿರುಲೇಶ್ ಬೆಳ್ಳೂರು ತಿಳಿಸಿದ್ದಾರೆ.ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟವನ್ನು ಮಟ್ಟ ಹಾಕಲು ಪುಂಜಾಲಕಟ್ಟೆ ಠಾಣಾ ಎಸ್.ಐ ಸುತೇಶ್ ಅವರು ನಿನ್ನೆ ಖಚಿತ ಮಾಹಿತಿಯನ್ನಾಧರಿಸಿ ಅಕ್ರಮ ಗೊ ಸಾಗಟ ವಾಹನವನ್ನು ತಡೆದು ವಾಹನವನ್ನೂ ವಶಪಡಿಸಿ ಗೋವನ್ನೂ ರಕ್ಷಿಸಿದ್ದಾರೆ. ಪ್ರತಿರೋಧ ತೋರಿದ ಗೊಕಳ್ಳರ ಉಧ್ಧಟತನವನ್ನೂ ಹಿಂದೂ ಜಾಗರಣಾ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದವರು ತಿಳಿಸಿದ್ದಾರೆ.
Be the first to comment on "ಗೋಸಾಗಾಟ ವಾಹನವನ್ನು ಬೆನ್ನಟ್ಟಿ ಹಿಡಿದ ಪುಂಜಾಲಕಟ್ಟೆ ಪೊಲೀಸರು"