ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ನಿರ್ಮಾಣ
FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಬಂಟ್ವಾಳದ ವಿದ್ಯಾಗಿರಿಯ ಅರ್ಬಿಗುಡ್ಡೆ ಎಂಬಲ್ಲಿ ಸಮಗ್ರ ವಿದ್ಯುತ್ ಯೋಜನೆಯಡಿ ನಿರ್ಮಾಣಗೊಂಡ ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರವನ್ನು ಇಂಧನ ಸಚಿವ ವಿ.ಸುನಿಲ್ ಕುಮಾರ್ ಸೋಮವಾರ ಮೇ 9ರಂದು ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಲಿದ್ದಾರೆ.
ಸಚಿವರಾದ ಎಸ್.ಆಂಗಾರ, ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಹಿಸಲಿದ್ದು, ವಿವಿಧ ಗಣ್ಯರು, ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಪ್ರಕಟಣೆ ತಿಳಿಸಿದೆ.
ಬಂಟ್ವಾಳ 33/11ಕೆವಿ ವಿದ್ಯುತ್ ಉಪಕೇಂದ್ರಕ್ಕೆ ರೂ. 11.98 ಕೋಟಿ ವೆಚ್ಚವಾಗಿದೆ. 2*8 ಎಂವಿಎ ಸಾಮರ್ಥ್ಯದ, ಒಟ್ಟು 7 ಸಂಖ್ಯೆಯ 11 ಕೆವಿ ವಿದ್ಯುತ್ ಮಾರ್ಗಗಳು (ಫೀಡರ್‌ಗಳು) 10.25 ಕಿ.ಮೀ, 2 ಸಂಖ್ಯೆಯ 33 ಕೆವಿ ಇನ್‌ಕಮಿಂಗ್ ವಿದ್ಯುತ್ ಮಾರ್ಗಗಳು 4.04 ಕಿ.ಮೀ ಇದಕ್ಕೆ ಒಳಗೊಂಡಿದ್ದು, ಬಂಟ್ವಾಳ ಕಸಬಾ, ಬಿ ಮೂಡ, ಅಮ್ಟಾಡಿ, ಕುರಿಯಾಳ, ನಾವೂರು, ಮೂಡನಡುಗೋಡು, ಪಂಜಿಕಲ್ಲು ಇತ್ಯಾದಿ ಪ್ರದೇಶಗಳ 14,000 ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.
ಏನಿದು ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರ
ಇದು ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು. ಈ ಯೋಜನೆಯಡಿಯಲ್ಲಿ ನಗರ, ಉಪನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಸಂಬಂಧಿಸಿದಂತೆ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ, ಭೂಗತ ಕೇಬಲ್ ಅಳವಡಿಕೆ ಸೇರಿದಂತೆ ವಿದ್ಯುತ್ ಜಾಲದ ವ್ಯವಸ್ಥೆ ಸುಧಾರಣೆ, ವಿದ್ಯುತ್ ಸರಬರಾಜಿನಲ್ಲಿನ ವಿಶ್ವಾಸಾರ್ಹತೆ ಮತ್ತು ಗುಣಮಟ್ಟ ಹೆಚ್ಚಿಸಲು ಹಾಗೂ ವಿದ್ಯುತ್ ನಷ್ಟ ಕಡಿಮೆಗೊಳಿಸುವ ಕಾಮಗಾರಿಗಳು ಒಳಗೊಂಡಿರುತ್ತದೆ.
- ಯೋಜನೆಯಡಿಯಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಮಂಗಳೂರು ಮತ್ತು ಉಡುಪಿ ವೃತ್ತಗಳ ಪಟ್ಟಣಗಳಲ್ಲಿ ರೂ. 39.48 ಕೋಟಿ ಮೊತ್ತಕ್ಕೆ ನಾಲ್ಕು ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲು ಮಂಜೂರಾತಿ ನೀಡಿದ್ದು, ಯೋಜನೆಯ ಮಾರ್ಗಸೂಚಿಯಂತೆ ಮಂಜೂರಾತಿ ಮೊತ್ತದ ಶೇ. 60 ರಷ್ಟು ಮೊತ್ತವು ಕೇಂದ್ರದಿಂದ ಅನುದಾನವಾಗಿದ್ದು, ಉಳಿದ ಶೇ. 40 ರಷ್ಟನ್ನು ಮೆಸ್ಕಾಂ ವತಿಯಿಂದ ಭರಿಸಬೇಕಾಗಿರುತ್ತದೆ.
- ಸಾಂಪ್ರದಾಯಿಕ ಉಪಕೇಂದ್ರಗಳಿಗೆ ಕನಿಷ್ಠ 50 ರಿಂದ 60 ಸಾವಿರ ಚದರ ಅಡಿ ಭೂಮಿ ಅಗತ್ಯವಿದ್ದು, ಜಿಐಎಸ್ ಉಪಕೇಂದ್ರವನ್ನು ಸುಮಾರು 5 ರಿಂದ 6 ಸಾವಿರ ಚದರ ಅಡಿ ಭೂಮಿಯಲ್ಲಿ ಸ್ಥಾಪಿಸಬಹುದಾಗಿರುತ್ತದೆ.
- ಸಾಂಪ್ರದಾಯಿಕ ಉಪಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಭೂಮಿಯು ನಗರ ಪ್ರದೇಶಗಳಲ್ಲಿ ಲಭ್ಯವಿರದ ಕಾರಣ ಸಣ್ಣ ಹಾಗೂ ಪರಿಣಾಮಕಾರಿಯಾದ ಅದೇ ಸಾಮರ್ಥ್ಯದ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್ ಗಳನ್ನು ನಿರ್ಮಿಸಬಹುದಾಗಿರುತ್ತದೆ.
- ಸಾಂಪ್ರದಾಯಿಕ ಉಪಕೇಂದ್ರಗಳಿಗೆ ಹೋಲಿಸಿದಲ್ಲಿ ಜಿಐಎಸ್ ಉಪಕೇಂದ್ರದ ನಿರ್ವಹಣೆ ಹಾಗೂ ನಿರ್ವಹಣಾ ವೆಚ್ಚವು ಕಡಿಮೆಯಾಗಿರುತ್ತದೆ.
ಜಿಐಎಸ್ ಉಪಕೇಂದ್ರದಲ್ಲಿ ಪರಿವರ್ತಕಗಳನ್ನು ಹೊರತುಪಡಿಸಿ ಇತರ ಎಲ್ಲ ಸ್ವಿಚ್‌ಗೇರ್‌ಗಳನ್ನು ಕಂಟ್ರೋಲ್ ರೂಮ್‌ನ ಒಳಗಡೆ ಅಳವಡಿಸುವುದರಿಂದ ಹೆಚ್ಚು ಸುರಕ್ಷತೆ ಮತ್ತು ಬಾಳ್ವಿಕೆ ಹೊಂದಿರುತ್ತದೆ. ಆದ್ದರಿಂದ ಕಡಿಮೆ ಅಡಚಣೆಯ ನಿರಂತರ ವಿದ್ಯುತ್ ಸರಬರಾಜು ಮಾಡಬಹುದಾಗಿದೆ.
ಬಂಟ್ವಾಳದ ವಿದ್ಯುತ್ ಸರಬರಾಜು ಇಂದಿನ ಸ್ಥಿತಿ: ಬಂಟ್ವಾಳ ತಾಲೂಕಿನ ದಿನನಿತ್ಯದ ನಿಯಂತ್ರಿತಗರಿಷ್ಠ ವಿದ್ಯುತ್ ಬೇಡಿಕೆಯು ಸುಮಾರು 140 ಮೆ.ವ್ಯಾ. ಆಗಿರುತ್ತದೆ. ವರ್ಷಂಪ್ರತಿ ಬೇಡಿಕೆ ಪ್ರಮಾಣವು ಹೆಚ್ಚಾಗುತ್ತಿದ್ದು ಸರಾಸರಿ ಶೇ.10ರಷ್ಟು ವಾರ್ಷಿಕ ಬೇಡಿಕೆಯಲ್ಲಿ ಏರಿಕೆಯಾಗುತ್ತಿರುತ್ತದೆ. 81 ಗ್ರಾಮಗಳು ಹಾಗೂ ಒಂದು ಪುರಸಭೆ, ಒಂದು ಪಟ್ಟಣ ಪಂಚಾಯತನ್ನು ಒಳಗೊಂಡ ಬಂಟ್ವಾಳತಾಲೂಕಿನಲ್ಲಿ ಮೆಸ್ಕಾಂ ಇಲಾಖೆಯ ಮೂರುಕಾರ್ಯ ಮತ್ತು ಪಾಲನಾ ಉಪವಿಭಾಗಗಳು ಕಾರ್ಯಾಚರಿಸುತ್ತಿದೆ. ಒಟ್ಟು 157356 ಸಂಖ್ಯೆಯ ಗ್ರಾಹಕರಿದ್ದು ತಾಲೂಕು ವ್ಯಾಪ್ತಿಯಲ್ಲಿ 220 ಕೆವಿ ನೆಟ್ಲಮುಡ್ನೂರು ಉಪಕೇಂದ್ರ, 110/11 ಕೆವಿ ಬಂಟ್ವಾಳ,ವಿಟ್ಲ,ಸಾಲೆತ್ತೂರು ಉಪಕೇಂದ್ರಹಾಗೂ 33/11 ಕೆವಿ ವಗ್ಗ, ಕುಕ್ಕಿಪಾಡಿ, ಹಾಗೂ ಕಲ್ಲಡ್ಕ ವಿದ್ಯುತ್ ಉಪಕೇಂದ್ರಗಳು ಕಾರ್ಯಾಚರಿಸುತ್ತಿದೆ. ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ 54 ಸಂಖ್ಯೆಯ 11 ಕೆವಿ ಫೀಡರುಗಳ ಮುಖಾಂತರಇಲಾಖೆಯು ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುತ್ತಿದೆ. ತಾಲೂಕಿನಾದ್ಯಂತ 4560 ಸಂಖ್ಯೆಯ ವಿತರಣಾ ಪರಿವರ್ತಕಗಳ ( ಟ್ರಾನ್ಸ್‌ಫಾರ್ಮರ್) ಮೂಲಕ ಗ್ರಾಹಕರಿಗೆ ವಿದ್ಯುತ್ ಸೇವೆಯನ್ನು ಒದಗಿಸಲಾಗುತ್ತಿದೆ.
ವಿದ್ಯುತ್ ಬೇಡಿಕೆ ಗಮನದಲ್ಲಿರಿಸಿಕೊಂಡು ಸಂಗಬೆಟ್ಟುವಿನಲ್ಲಿ 110 ಕೆವಿ ಉಪಕೇಂದ್ರ, ಸರಪಾಡಿಯಲ್ಲಿ 110 ಕೆವಿ ಉಪಕೇಂದ್ರ ರಚಿಸಲು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿರುತ್ತದೆ. ಸೂಕ್ತ ಜಮೀನು ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುತ್ತದೆ, 33 ಕೆವಿ ವಗ್ಗ,ಕುಕ್ಕಿಪಾಡಿ ಮತ್ತುಕಲ್ಲಡ್ಕ ಉಪಕೇಂದ್ರಗಳಲ್ಲಿ ಹೆಚ್ಚುವರಿ ಸಾಮರ್ಥ್ಯದ ಶಕ್ತಿಪರಿವರ್ತಕಗಳನ್ನು ಅಳವಡಿಸಲು ಕಾರ್ಯಯೋಜನೆ ಸಲ್ಲಿಸಲಾಗಿದೆ.
ಕಳೆದ 4 ವರ್ಷಗಳ ಅವಧಿಯಲ್ಲಿಗ್ರಾಹಕರಿಗೆಉತ್ತಮ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ನೀಡುವ ಉದ್ದೇಶದಿಂದ ಒಟ್ಟು 19 ಕೋಟಿ ರೂಪಾಯಿ ವೆಚ್ಚದಲ್ಲಿ ವ್ಯವಸ್ಥೆ ಸುಧಾರಣಾ ಯೋಜನೆಯಡಿ ಬಂಟ್ವಾಳ ತಾಲೂಕಿನಲ್ಲಿ 242 ಪರಿವರ್ತಕಗಳ ಅಳವಡಿಕೆ ಮತ್ತು 1350 ಕಿ.ಮೀ. ನಷ್ಟು ಹಳೇ ತಂತಿಗಳನ್ನು ಬದಲಾಯಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ ವಿವಿಧ ಸಾಮರ್ಥ್ಯದ 4560 ಸಂಖ್ಯೆ ವಿತರಣಾ ಪರಿವರ್ತಕಗಳಿದ್ದು, ಒಟ್ಟು ಸಾಮರ್ಥ್ಯ 250 ಎಂ.ವಿ.ಎ.ರಷ್ಟಿರುತ್ತದೆ. ಒಟ್ಟು 2421.23 ಕಿ.ಮೀ. ಹೆಚ್.ಟಿ. ಮತ್ತು 7029 ಕಿ.ಮೀ. ಎಲ್.ಟಿ. ಮಾರ್ಗಗಳಿರುತ್ತವೆ.
ಕೇಂದ್ರ ಸರಕಾರದ ಮಹತ್ತರ ಯೋಜನೆಯಾದಐ.ಪಿ.ಡಿ.ಎಸ್. ನಡಿಯಲ್ಲಿ ನಗರ ಪ್ರದೇಶದ ವಿದ್ಯುತ್ ಸರಬರಾಜಿನಲ್ಲಿನ ವಿಶ್ವಾಸಾರ್ಹತೆ ಮತ್ತುಗುಣಮಟ್ಟ ಹೆಚ್ಚಿಸಲು ವಿನೂತನಜಿ.ಐ.ಎಸ್(ಗ್ಯಾಸ್‌ಇನ್ಸುಲೇಟೆಡ್ ಸಬ್ ಸ್ಟೇಷನ್)ತಂತ್ರಜ್ಞಾನದೊಂದಿಗೆ ಮೊದಲ ಬಾರಿಗೆ ಮೆಸ್ಕಾಂ ವ್ಯಾಪ್ತಿಯಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ವಿಧ್ಯಾಗಿರಿ, ಅರ್ಬಿಗುಡ್ಡೆ ಎಂಬಲ್ಲಿ 11.98 ಕೋಟಿರೂ ವೆಚ್ಚದಲ್ಲಿ 16 ಎಂ.ವಿ.ಎ ಸಾಮರ್ಥ್ಯದ 33 ಕೆವಿ ವಿದ್ಯುತ್‌ಉಪಕೇಂದ್ರ ನಿರ್ಮಾಣವಾಗಿರುತ್ತದೆ. ವಿದ್ಯುತ್ ಅಡಚಣೆಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ 33 ಕೆವಿ ಹಾಗೂ 11 ಕೆವಿ ಮಾರ್ಗಗಳನ್ನು ಭೂಅಂತರ್ಗತ ಕೇಬಲ್ ನ್ನು ಅಳವಡಿಸಿ ರಚನೆ ಮಾಡಲಾಗಿರುತ್ತದೆ. ಎರಡು ಸಂಖ್ಯೆಯ 33 ಕೆವಿ ಒಳಬರುವ ಮಾರ್ಗಗಳು ಮತ್ತು 7 ಸಂಖ್ಯೆಯ 11 ಕೆವಿ ಮಾರ್ಗಗಳನ್ನು ರಚಿಸಲಾಗಿರುತ್ತದೆ. ಪ್ರಸ್ತುತ ಬಂಟ್ವಾಳ ಕಸ್ಬಾ, ಬಿ.ಮೂಡ ನಾವೂರು, ಮೂಡನಡುಗೋಡು,ಅಮ್ಟಾಡಿ,ಕುರಿಯಾಲ ಗ್ರಾಮಗಳಿಗೆ ಬ್ರಹ್ಮರಕೂಟ್ಲು ಸಮೀಪದ 110 ಕೆವಿ ಬಂಟ್ವಾಳ ಉಪಕೇಂದ್ರದಿಂದ 11 ಕೆವಿ ಎರಡು ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜಾಗುತ್ತಿದ್ದು, ಸದರಿ ಮಾರ್ಗಗಳು ಗುಡ್ಡಗಾಡು, ತೆಂಗು,ಅಡಿಕೆ, ರಬ್ಬರ್ ತೋಟಗಳ ಮೂಲಕ ಹಾದು ಹೋಗುತ್ತಿದ್ದು ಪ್ರಾಕೃತೀಕ ವೈಪರಿತ್ಯದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ದೋಷಗಳು ಉಂಟಾಗಿಗ್ರಾಹಕರಿಗೆ ವಿದ್ಯುತ್‌ಅಡಚಣೆಯಾಗುತ್ತಿರುತ್ತದೆ. ಈ ಯೋಜನೆಂಯಲ್ಲಿ ಸದರಿ ಎರಡು 11 ಕೆವಿ ಮಾರ್ಗಗಳನ್ನು ವಿಭಜಿಸಿ ಹೊಸದಾಗಿ 7 ಸಂಖ್ಯೆಯ ಮಾರ್ಗಗಳ ರಚನೆ ಮಾಡಿರುವುದರಿಂದಒಟ್ಟು 9 ಸಂಖ್ಯೆಯ 11 ಕೆವಿ ಮಾರ್ಗಗಳು ಬಳಕೆಗೆ ದೊರಕಿದಂತಾಗುತ್ತದೆ. ಇದರಿಂದಾಗಿ 11 ಕೆವಿ ಮಾರ್ಗಗಳಲ್ಲಿನ ವಿದ್ಯುತ್ ಅಡಚಣೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸಬಹುದಾಗಿರುತ್ತದೆ. 11 ಕೆವಿ ಮಾರ್ಗದ ಕಟ್ಟಕಡೆಯ ಗ್ರಾಹಕನಿಗೂ ಉತ್ತಮ ಗುಣಮಟ್ಟದ ವಿದ್ಯುತ್‌ದೊರೆಯಲಿದೆ. ಇದಲ್ಲದೇ ದೀನ್ ದಯಾಳ್ ಮತ್ತು ಸೌಭಾಗ್ಯಯೋಜನೆಯಲ್ಲಿ 455 ಮನೆಗಳಿಗೆ ಮತ್ತು ಬೆಳಕು ಯೋಜನೆಯ ಫೇಸ್-1 ನಲ್ಲಿ 496 ಮನೆಗಳಿಗೆ ಉಚಿತವಾಗಿವಿದ್ಯುತ್ ಸಂಪರ್ಕ ನೀಡಲಾಗಿದ್ದು, ಫೇಸ್-2 ನಲ್ಲಿ 616 ಫಲಾನುಭವಿಗಳನ್ನು ಗುರುತಿಸಲಾಗಿದ್ದು ಈಗಾಗಲೇ 103 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿರುತ್ತದೆ.ಜನಸ್ನೇಹಿ ಯೋಜನೆ, 24 ಘಂಟೆಯೊಳಗೆ ವಿಫಲಗೊಂಡ ಪರಿವರ್ತಕಗಳನ್ನು ಬದಲಾಯಿಸುವುದುಇತ್ಯಾದಿ ಯೋಜನೆಗಳ ಮೂಲಕ ಗ್ರಾಹಕಕೇಂದ್ರಿತ ಸೇವೆಯನ್ನು ನೀಡಲಾಗುತ್ತಿರುತ್ತದೆ.
Be the first to comment on "ಬಂಟ್ವಾಳದಲ್ಲಿ ಸೋಮವಾರ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರ ಉದ್ಘಾಟನೆ"