www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ಮನೆಯವರು ಸ್ಥಳೀಯವಾಗಿ ನಾಟಕ ನೋಡಲು ಹೋಗಿದ್ದಾಗ, ಒಂಟಿಯಾಗಿ ಮನೆಯಲ್ಲಿ ದ್ದ ವಯೋವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಜೀವ ಬೆದರಿಕೆ ಹಾಕಿ ಕಿವಿಯಲ್ಲಿ ಇದ್ದ ಬಂಗಾರ ಹಾಗೂ ಗೊದ್ರೇಜ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನು ದರೋಡೆ ಮಾಡಿರುವ ಘಟನೆ ಮಾ.26ರ ಶನಿವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಕಾಂತಪಲ್ಕೆ ಎಂಬಲ್ಲಿ ನಡೆದಿದೆ
ಸೇಸಪ್ಪ ನಾಯ್ಕ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ ಸುಮಾರು 2.45ರ ವೇಳೆ ಉಳಿದವರಿಗೆ ಗೊತ್ತಾಗಿದೆ. ಸೇಸಪ್ಪ ನಾಯ್ಕ ಅವರ ತಾಯಿ ಮುತ್ತು ಹಲ್ಲೆಗೊಳಗಾದವರು. ಘಟನೆಯಿಂದ ಆಘಾತಗೊಂಡಿದ್ದ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕರೆತರಲಾಯಿತು. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ಸಾಗಿದೆ.
ಸೇಸಪ್ಪ ನಾಯ್ಕ್ ಅವರು ತನ್ನ ಪತ್ನಿ ಮತ್ತು ತಾಯಿ ಮುತ್ತು ಅವರೊಂದಿಗೆ ವಾಸವಾಗಿದ್ದು, ಶನಿವಾರ ರಾತ್ರಿ ಸ್ಥಳೀಯವಾಗಿ ನಡೆಯುತ್ತಿದ್ದ ನಾಟಕ ವೀಕ್ಷಿಸಲು ತನ್ನ ಪತ್ನಿಯೊಂದಿಗೆ ತೆರಳಿದ್ದರು. ಈ ಸಂದರ್ಭ ತಾಯಿ ಒಬ್ಬರೇ ಮನೆಯಲ್ಲಿದ್ದರು. ರಾತ್ರಿ ಸುಮಾರು 8 ಗಂಟೆ ಬಳಿಕ ಅವರು ಮನೆಯಿಂದ ತೆರಳಿದ್ದು, ಮಧ್ಯರಾತ್ರಿ ನಾಟಕ ಮುಗಿಸಿ ಸುಮಾರು 2.45ರ ವೇಳೆ ಮನೆಗೆ ಬಂದಾಗ ಬಾಗಿಲು ತೆರೆದಿದ್ದು, ಹಾನಿ ಮಾಡಿದ್ದು ಗೊತ್ತಾಗಿದೆ. ಈ ಅವಧಿಯಲ್ಲಿ ವ್ಯಕ್ತಿಯೋರ್ವ ಮನೆಗೆ ಆಗಮಿಸಿ, ಅವರ ತಾಯಿಗೆ ಬೆದರಿಸಿ, ಬಲವಂತವಾಗಿ ಕಿವಿಯಲ್ಲಿದ್ದ ಬೆಂಡೋಲೆಯನ್ನು ಸೆಳೆದಿದ್ದಾನೆ. ಅಲ್ಲದೆ, ಮನೆಯಲ್ಲಿದ್ದ ಕಪಾಟು ತೆರೆದಿದ್ದು, ಅಲ್ಲಿದ್ದ ಪತ್ನಿಯ ಕರಿಮಣಿ ಸರ, ತನ್ನ ಉಂಗುರ ಸೇರಿ ಸುಮಾರು 4 ಪವನ್ ಗಿಂತಲೂ ಅಧಿಕ ಚಿನ್ನಾಭರಣ ಜೊತೆಗೆ ಕೆಲ ನಗದನ್ನು ದರೋಡೆ ಮಾಡಲಾಗಿದೆ. ಭಾನುವಾರ ಬೆಳಿಗ್ಗೆ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಎಸ್ ಐ ಸಂಜೀವ,ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್,ಡಿವೈಎಸ್ಪಿ ಪ್ರತಾಪ್ ರಾಥೋಡ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ಶ್ವಾನದಳ,ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
Be the first to comment on "ಮಣಿನಾಲ್ಕೂರು: ಮನೆಯಲ್ಲಿದ್ದ ಒಂಟಿ ವೃದ್ಧೆಯ ಬೆದರಿಸಿ ದರೋಡೆ"