www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳನ್ಯೂಸ್ ವರದಿ
ಗುರುವಾರ ಸಂಜೆ ಬಂಟ್ವಾಳ ಪರಿಸರದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಇದರಿಂದ ತಂಪಾದ ವಾತಾವರಣ ಮೂಡಿದರೂ ಹಲವೆಡೆ ಜನರು ಪರದಾಡಬೇಕಾಯಿತು. ಬಿ.ಸಿ.ರೋಡ್ ಪುಂಜಾಲಕಟ್ಟೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು ಮನ್ನಾಪು ಎಂಬಲ್ಲಿ ರಸ್ತೆಯ ಪಕ್ಕದಲ್ಲೇ ಇರುವ ಮನೆಯ ಅಂಗಳದಲ್ಲಿ ನೀರು ತುಂಬಿ ಒಣಗಿಸಲು ಇಟ್ಟ ಅಡಕೆ ಹಾಳಾದವು. ರಸ್ತೆ ಪಕ್ಕದಲ್ಲಿ ಸರಿಯಾಗಿ ನೀರು ಹರಿಯುವ ವ್ಯವಸ್ಥೆಗಳಿಲ್ಲದ ಪರಿಣಾಮ ಮನೆಯವರು ತೊಂದರೆ ಅನುಭವಿಸಬೇಕಾಯಿತು. ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ನಿವಾಸಿ ಹರೀಶ ಶೆಟ್ಟಿ ಎಂಬವರ ಕಾಂಕ್ರೀಟು ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಗೋಡೆಗೆ ಹಾನಿಯಾಗಿದೆ. ಲೊರೆಟ್ಟೋ ಅಗ್ರಾರ್ ಜಕ್ರಿಬೆಟ್ಟು ರಸ್ತೆ ಬದಿ ಸೂಕ್ತ ಚರಂಡಿ ಇಲ್ಲದ ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ಕಂಡುಬಂತು. ಬಿ.ಸಿ.ರೋಡ್, ಮೇಲ್ಕಾರ್, ಕಲ್ಲಡ್ಕ ಸಹಿತ ಹಲವೆಡೆ ಕಾಮಗಾರಿ ನಡೆಯುತ್ತಿರುವ ರಸ್ತೆ ಪಕ್ಕದಲ್ಲಿ ಸರಿಯಾಗಿ ನೀರು ಹರಿಯಲು ವ್ಯವಸ್ಥೆಗಳಿಲ್ಲದೆ ಜನರು ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾಯಿತು. ಭಂಡಾರಿಬೆಟ್ಟು ಎಂಬಲ್ಲೂ ಮನೆಗೆ ಮಳೆಯಿಂದ ಹಾನಿಯಾದ ವರದಿಗಳು ಲಭಿಸಿವೆ.
Be the first to comment on "ಸಂಜೆ ಮಳೆ, ಬಂಟ್ವಾಳದ ಹಲವೆಡೆ ತೊಂದರೆ"