ಅಡ್ಯನಡ್ಕ: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನ ಬಾರ್ಡ್ )ನ ತರಬೇತಿ ಕೇಂದ್ರಗಳಲ್ಲಿ ಒಂದಾಗಿರುವ ಬ್ಯಾಂಕರ್ಸ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ಮೆಂಟ್ (BIRD) ಮಂಗಳೂರು ಹಾಗೂ ಕೆನರಾ ಬ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಬ್ಯಾಂಕಿಂಗ್ ಮಣಿಪಾಲ ಇದರ ಸಹಯೋಗದಲ್ಲಿ ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ಅಡ್ಯನಡ್ಕದ ವಾರಣಾಶಿ ಸಾವಯವ ತೋಟದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಕೆನರಾ ಬ್ಯಾಂಕ್ ನ ಉನ್ನತ ಅಧಿಕಾರಿಗಳಿಗೆ ಗ್ರಾಮೀಣ ಜೀವನಶೈಲಿಯ ಒಳನೋಟವನ್ನು ನೀಡುತ್ತದೆ . ಇದರಿಂದಾಗಿ ಬ್ಯಾಂಕ್ ನ ಅಧಿಕಾರಿಗಳು ಗ್ರಾಮೀಣ ಆರ್ಥಿಕತೆ , ಕೃಷಿ ಚಟುವಟಿಕೆಗಳು ಹಾಗೂ ಇತರ ಸಾಮಾಜಿಕ – ಆರ್ಥಿಕ ಚಟುವಟಿಕೆಗಳ ವಿವಿಧ ಸೂಕ್ಷ್ಮತೆಗಳು ಹಾಗೂ ವಿವರಗಳನ್ನು ಅರ್ಥೈಸಿಕೊಂಡು ಸೂಕ್ತವಾದ ಬ್ಯಾಂಕಿಂಗ್ ಸೇವೆಗಳು ಹಾಗೂ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ . ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಧಿಕಾರಿಗಳು ಕೇಪು ಗ್ರಾಮದ ಪಂಚಾಯತ್ , ಮಾರುಕಟ್ಟೆ , ಅಂಗನವಾಡಿ , ಪ್ರಾಥಮಿಕ ಆರೋಗ್ಯ ಕೇಂದ್ರ , ಅಂಚೆ ಕಚೇರಿ , ಸ್ವಸಹಾಯ ಸಂಘಗಳು , ರೈತ ಉತ್ಪಾದಕ ಸಂಘ ಹಾಗೂ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಲಿದ್ದಾರೆ . ಗ್ರಾಮದ ರೈತರೊಂದಿಗೆ ಹಾಗೂ ಗ್ರಾಮೀಣ ಅಧಿಕಾರಿಗಳೊಂದಿಗೆ ಚರ್ಚೆ ಕಾರ್ಯಕ್ರಮದ ಭಾಗವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Be the first to comment on "ನ.29ರಿಂದ ಡಿ.1ರವರೆಗೆ ಅಡ್ಯನಡ್ಕದ ವಾರಣಾಶಿ ಸಾವಯವ ತೋಟದಲ್ಲಿ BIRD, ಕೆನರಾ ಬ್ಯಾಂಕ್ ಇನ್ಸಿಟ್ಯುಟ್ ಆಫ್ ರೂರಲ್ ಬ್ಯಾಂಕಿಂಗ್ ಸಹಯೋಗದಲ್ಲಿ ಗ್ರಾಮವಾಸ್ತವ್ಯ"