ಬಂಟ್ವಾಳ: ಮಕ್ಕಳ ಮಾಸೋತ್ಸವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನಿವಾಸ ಒಡ್ಡೂರು ಫಾರ್ಮ್ಸ್ ನಲ್ಲಿ ಕೃಷಿ ಖುಷಿ ಎಂಬ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಬಂಟ್ವಾಳ ತಾಲೂಕಿನ 5 ಸರ್ಕಾರಿ ಶಾಲೆಗಳ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡರು.
ಸ್ವತಃ ಕೃಷಿ ಕಾರ್ಯವನ್ನು ನಡೆಸುತ್ತಿರುವ ರಾಜೇಶ್ ನಾಯ್ಕ್ ಅವರ ವಿಶಾಲವಾದ ಕೃಷಿ ಭೂಮಿಯಲ್ಲಿ ಗೋವು, ಸಸ್ಯ ಸಂಪತ್ತು, ಕೆರೆ ಹಾಗೂ ಅಲ್ಲಿನ ವೈವಿಧ್ಯಮಯ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿದ ಮಕ್ಕಳು ಹಲವು ಸಂದೇಹಗಳನ್ನು ಕೇಳಿ ಪರಿಹರಿಸಿಕೊಂಡರು. ದಿನವಿಡೀ ಮಕ್ಕಳೊಂದಿಗೆ ಕಳೆದ ಶಾಸಕರು, ಮಕ್ಕಳೊಂದಿಗೆ ಅನುಭವ ಹಂಚಿಕೊಂಡರು. ಮಕ್ಕಳೊಂದಿಗೆ ಇನ್ನು ಮುಂದಕ್ಕೂ ಬೆರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ ಶಾಸಕರು ಅದಕ್ಕೊಂದು ದಿನ ನಿಗದಿಪಡಿಸುವ ಕುರಿತು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ,. ಅನುಭವಾತ್ಮಕ ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಕೆಯಾಗಿದ್ದು, ಅದು ಇಂತಹ ಕಾರ್ಯಕ್ರಮಗಳ ಮೂಲಕ ಸಾಕಾರವಾಗುತ್ತದೆ. ಇಲ್ಲಿನ ಆಸಕ್ತಿಯ ವಿಚಾರದಲ್ಲಿ ಮುಂದುವರಿಯಲು ಅವಕಾಶವಿದ್ದು, ಭಾರತೀಯತೆ ಹೊಸ ಶಿಕ್ಷಣ ನೀತಿ ಕಲಿಸುತ್ತದೆ ಎಂದರು. ಬಂಟ್ವಾಳ ಲಯನ್ಸ್ ಕ್ಲಬ್ ನ ನಿರ್ಮಲ ಹೃದಯ ವಿಶೇಷಚೇತನ ಮಕ್ಕಳ ಪಾಲನಾ ಕೇಂದ್ರದ ಸಂಚಾಲಕ ದಾಮೋದರ್ ಮುಖ್ಯ ಅತಿಥಿಯಾಗಿದ್ದರು.
ಪೊಲೀಸ್ ಇಲಾಖೆಯ ಕುರಿತು ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ, ಆರೋಗ್ಯ ಇಲಾಖೆಯ ಡಾ. ಹೇಮಪ್ರಭಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಚೈಲ್ಡ್ ಲೈನ್‌ನ ದೀಕ್ಷಿತ್ ಮಕ್ಕಳ ಜತೆ ಸಂವಾದ ನಡೆಸಿದರು. ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರೊಬೆಷನರಿ ಪಿಎಸ್‌ಐ ರಾಮಕೃಷ್ಣ, ಶಿಕ್ಷಣ ಸಂಯೋಜಕಿ ಸುಜಾತಕುಮಾರಿ, ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು. ಮಕ್ಕಳ ಹಕ್ಕುಗಳ ಮಾಸೋತ್ಸವ ಜಿಲ್ಲಾ ಸಂಚಾಲಕ ಮಂಜು ವಿಟ್ಲ, ಸಂಪನ್ಮೂಲ ವ್ಯಕ್ತಿ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಡೆಸಿಕೊಟ್ಟರು. ಪತ್ರಕರ್ತ ಸಂದೀಪ್ ಸಾಲ್ಯಾನ್ ಸ್ವಾಗತಿಸಿ, ಪತ್ರಕರ್ತ ಹರೀಶ್ ಮಾಂಬಾಡಿ ವಂದಿಸಿದರು.
Be the first to comment on "ಒಡ್ಡೂರು ಫಾರ್ಮ್ಸ್ ನಲ್ಲಿ ಕೃಷಿ ಖುಷಿ: ಮಕ್ಕಳ ಮಾಸೋತ್ಸವ ಹಿನ್ನೆಲೆಯಲ್ಲಿ ವಿನೂತನ ಕಾರ್ಯಕ್ರಮ"