





ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕಿನ ಪೆರ್ಲಾಪು ಎಂಬಲ್ಲಿ ಕಡೇಶಿವಾಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ ಕೆಲ ವರ್ಷಗಳಿಂದ ತನ್ನ ಕೃಷಿ ಚಟುವಟಿಕೆಗಳಿಂದ ಸುದ್ದಿಯಲ್ಲಿದೆ. ಇದೀಗ ಗಿಡ ನೆಟ್ಟು ಫಲ ನೀಡುತ್ತಿದೆ. ಸುಮಾರು 60 ಮರಗಳಲ್ಲಿ ಅಡಕೆ ಫಲಬಿಡುವ ಹಂತದಲ್ಲಿದೆ. ಇದು ಕಡೇಶಿವಾಲಯ ಪೆರ್ಲಾಪು ಶಾಲೆಯ ಯಶೋಗಾಥೆ.
ವಿಶೇಷವಾಗಿ ದ್ರಾಕ್ಷಿಯ ಚಪ್ಪರ, ಆಹ್ಲಾದಕರ ವಾತಾವರಣ ಮೂಡಿಸುವ ಔಷಧೀಯ ಸಸ್ಯಗಳ ವನ ಇಲ್ಲಿವೆ. ಜೊತೆಗೆ ವಾಣಿಜ್ಯ ಬೆಳೆಯಾದ ಅಡಕೆಯ 60 ಗಿಡಗಳು ಈಗ ಮರವಾಗುತ್ತಿವೆ. ಹಣ್ಣು, ತರಕಾರಿಗಳನ್ನು ಬೆಳೆಸಲಾಗುತ್ತದೆ. ಶಾಲೆಯ ಪರಿಸರ ಕ್ಲಬ್ ಸಹಿತ ಮಕ್ಕಳೆಲ್ಲರಿಗೂ ಇವುಗಳೊಂದಿಗೆ ಬೆರೆಯುವ ಸಂಭ್ರಮವನ್ನು ಶಾರೀರಿಕ ಶಿಕ್ಷಣ ಶಿಕ್ಷಕ ಭಾಸ್ಕರ ನಾಯ್ಕ್ ನೇತೃತ್ವದಲ್ಲಿ ಮುಖ್ಯಶಿಕ್ಷಕಿ ಉಮಾವತಿ ಹಾಗೂ ಶಿಕ್ಷಕರು ಕಲಿಸಿಕೊಟ್ಟಿದ್ದಾರೆ. ತೋಟದಲ್ಲಿ ಪ್ರತ್ಯೇಕವಾಗಿ ಔಷಧೀಯ ವನವನ್ನೂ ನಿರ್ಮಿಸಲಾಗಿದ್ದು, ಇಲ್ಲಿ ಸಾಕಷ್ಟು ಬಗೆಯ ಔಷಧೀಯ ಗಿಡವನ್ನು ನೆಟ್ಟು ಮಕ್ಕಳಿಗೆ ಅದರ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ.
ಕೃಷಿ ನನ್ನ ಹವ್ಯಾಸ. ಮಕ್ಕಳಿಗೂ ಇದರ ಪಾಠ ಮಾಡುವ ಮೂಲಕ ಅವರಲ್ಲೂ ಆಸಕ್ತಿ ಬೆಳೆಯಲು ಕೈತೋಟ ಕಾರಣವಾಯಿತು. ಹಲವು ಹಿರಿಯ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಕೈತೋಟ ಮಾಡುವುದಕ್ಕೆ ನಮ್ಮ ಶಾಲೆಯ ಕೈತೋಟ ಪ್ರೇರಣೆಯಾಗಿದೆ. ಗಿಡ ನೆಟ್ಟವರು ಇಂದು ಕಾಲೇಜಿಗೆ ಹೋಗುತ್ತಿದ್ದಾರೆ, ಆದರೂ ಪ್ರೀತಿಯಿಂದ ಇಲ್ಲಿಗೆ ಬಂದು ಗಿಡದ ಬೆಳವಣಿಗೆ ನೋಡುತ್ತಿದ್ದಾರೆ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ ನಾಯ್ಕ್
ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಭಾಸ್ಕರ ನಾಯ್ಕ್ ಅವರು ವಿಶೇಷ ಮುತುವರ್ಜಿಯಿಂದ ಮಕ್ಕಳಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸುವಂತೆ ಇಡೀ ಶಾಲೆಯ ಪರಿಸರವನ್ನು ಸಮೃದ್ಧ ಕೃಷಿಯುಕ್ತವನ್ನಾಗಿಸಿದ್ದಾರೆ. ಶಿಕ್ಷಕರು, ಮಕ್ಕಳು, ಪೋಷಕರ ಪ್ರೋತ್ಸಾಹದಿಂದ ಶಾಲೆ ಕೈತೋಟ ಗಮನ ಸೆಳೆಯುವಂತಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಉಮಾವತಿ.
Be the first to comment on "ಔಷಧೀವನ, ಅಡಕೆ ತೋಟ – ಪೆರ್ಲಾಪುವಿನಲ್ಲಿರುವ ಕಡೇಶಿವಾಲಯದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಪಾಠ"