




ಬಂಟ್ವಾಳ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ್ನು ಕ್ರಿಯಾಶೀಲವಾಗಿ ಪುನರ್ ರೂಪಿಸಿ, ಚಟುವಟಿಕೆಯನ್ನು ಗುಣಾತ್ಮಕವಾಗಿ ವಿಸ್ತರಿಸಲು ಪ್ರಯತ್ನಿಸಲಾಗುವುದು, ಜನಪರ ಸಾಹಿತ್ಯ ಪರಿಷತ್ ನಮ್ಮ ಧ್ಯೇಯ ಎಂದು ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಎಂ.ಪಿ.ಶ್ರೀನಾಥ್ ಉಜಿರೆ ಭರವಸೆ ನೀಡಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಮ್ಮು ಮುಂದಿನ ಯೋಚನೆ, ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆ ಸೇರಿದಂತೆ ತಾಲೂಕು ಮಟ್ಟದಲ್ಲಿ ಸುಸಜ್ಜಿತ ಕನ್ನಡ ಭವನದ ನಿರ್ಮಾಣ,ಶಾಲಾ- ಕಾಲೇಜುಗಳಲ್ಲಿ ಸಾಹಿತ್ಯ ಚಟುವಟಿಕೆಯನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆ ನಿರ್ಮಿಸಿಕೊಡುವುದು,ಜಿಲ್ಲೆಯಲ್ಲಿರುವ ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಅವರ ಸಾಹಿತ್ಯಕ್ಕೆ ವೇದಿಕೆ ಕಲ್ಪಿಸಿಕೊಡುವುದು,ಸೃಜನಶೀಲ ಕಾರ್ಯಕ್ರಮಗಳಿಗೆ ಆದ್ಯತೆ,ಹಿರಿಯ ಸಾಹಿತಿಗಳ ಮಾರ್ಗದರ್ಶನದಿಂದ ಯುವ ಸಾಹಿತಿ,ಕವಿಗಳಿಗೆ ಅವಕಾಶ ಕಲ್ಪಿಸಿ ಪ್ರೇರಣೆ ನೀಡಲು ಉದ್ಧೇಶಿಸಿರುವುದಾಗಿ ತಿಳಿಸಿದರು.
ತಂತ್ರಜ್ಞಾನವನ್ನು ಬಳಸಿಕೊಂಡುಜಿಲ್ಲೆಯ ಸಾಹಿತಿಗಳ ಮತ್ತು ಸಾಹಿತ್ಯ ಕೃತಿಗಳ ದಾಖಲೀಕರಣಗೊಳಿಸುವುದು,ಕನ್ನಡದ ಉತ್ತಮ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡಲು ಪ್ರೋತ್ಸಾಹಿಸುವುದು,ತಂತ್ರಜ್ಞಾನದ ಮೂಲಕ ಓದುಗರಿಗೆ ಕನ್ನಡ ಪುಸ್ತಕಗಳು ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ನ.21 ರಂದು ಸಾಹಿತ್ಯ ಪರಿಷತ್ತಿನ ಚುನಾವಣೆಯು ಆಯಾಯ ತಾಲೂಕು ಕೇಂದ್ರದಲ್ಲಿ ಬೆ.8 ರಿಂದ ಸಂಜೆ 4 ರವರೆಗೆ ನಡೆಯಲಿದ್ದು ,ತನ್ನನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿ, ಮಂಜು ವಿಟ್ಲ, ಸುಭಾಶ್ಚಂದ್ರ ಜೈನ್, ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಇದ್ದರು.
Be the first to comment on "ಜನಪರ ಸಾಹಿತ್ಯ ಪರಿಷತ್: ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಎಂ.ಪಿ.ಶ್ರೀನಾಥ್ ಭರವಸೆ"