ಬಂಟ್ವಾಳ: ಕಾರಿಂಜ ಕ್ಷೇತ್ರದಲ್ಲಿ ಯುವಕರ ತಂಡ ಉದ್ದೇಶಪೂರ್ವಕವಾಗಿಯೇ ವಿಕೃತಿ ಮೆರೆದು ವಿಡಿಯೋ ಮಾಡಿ ವೈರಲ್ ಮಾಡಿದೆ. ಇವರನ್ನು ಮೂರು ದಿನದೊಳಗೆ ಬಂಧಿಸದೇ ಇದ್ದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಹಿಂದು ಜಾಗರಣಾ ವೇದಿಕೆ ಎಚ್ಚರಿಸಿದೆ.
ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಈ ಕುರಿತು ಬುಧವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದು, ದೇವಸ್ಥಾನಗಳ ಪಾವಿತ್ರ್ಯತೆಗೆ ಧಕ್ಕೆ ತರುವ ಇಂಥ ಹಲವು ಕೃತ್ಯಗಳು ನಡೆಯುತ್ತಿದ್ದು, ದೇಗುಲಗಳಿಗೆ ಸುರಕ್ಷತೆಯನ್ನು ಒದಗಿಸಬೇಕು, ಕಾರಿಂಜ, ನರಹರಿಯಂಥ ಪರ್ವತ ಪ್ರದೇಶಗಳಿಗೆ ಮೋಜು ಮಸ್ತಿಗೆಂದು ಬರುವವರಿಗೆ ಕಡಿವಾಣ ಹಾಕಬೇಕು, ಕಾರಿಂಜದಲ್ಲಿ ಪೊಲೀಸ್ ಔಟ್ ಪೋಸ್ಟ್ ಸದೃಢಗೊಳಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಪೊಲೀಸ್ ಇಲಾಖೆ ಸಹಿತ ಸಂಬಂಧಪಟ್ಟವರಿಗೆ ವಿಷಯ ಮನದಟ್ಟು ಮಾಡಲಾಗಿದ್ದು, ಹಿಂದು ಜಾಗರಣಾ ವೇದಿಕೆ ದೇವಸ್ಥಾನಗಳ ಪಾವಿತ್ರ್ಯತೆಯ ರಕ್ಷಣೆಗೆ ಕಟಿಬದ್ಧವಾಗಿದ್ದು, ಯಾವುದೇ ಅನಪೇಕ್ಷಿತ ಚಟುವಟಿಕೆಗಳು ನಡೆಯಲು ಆಸ್ಪದ ನೀಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ ನೆತ್ತರಕೆರೆ, ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಪ್ರಮುಖರಾದ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು, ಬಾಲಕೃಷ್ಣ ಕಲಾಯಿ, ಶರತ್, ನವೀನ್ ವಗ್ಗ, ಯೋಗೀಶ್ ಕುಮ್ಡೇಲ್, ರವಿ ಕೆಂಪುಗುಡ್ಡೆ, ಶರ್ಮಿತ್ ಉಪಸ್ಥಿತರಿದ್ದರು.
Be the first to comment on "ಕಾರಿಂಜದ ಪಾವಿತ್ರ್ಯತೆಗೆ ಧಕ್ಕೆ ತರುವ ವಿಡಿಯೋ ಮಾಡಿದ ಆರೋಪಿಗಳ ಮೂರು ದಿನದೊಳಗೆ ಆರೋಪಿಗಳ ಬಂಧಿಸದಿದ್ದರೆ ಹೋರಾಟ: ಹಿಂಜಾವೇ ಎಚ್ಚರಿಕೆ"