ಬಂಟ್ವಾಳ: ತಾಲೂಕಿನಲ್ಲಿರುವ ಡಿ.ಸಿ.ಮನ್ನಾ ಜಮೀನನ್ನು ಗುರುತಿಸಿ ಅದರಲ್ಲಿ ಅತಿಕ್ರಮಣ ಮತ್ತು ಉಳಿಕೆಯ ಸಂಪೂರ್ಣ ವಿವರವಾದ ವರದಿಯನ್ನು ಸಲ್ಲಿಸುವಂತೆ ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್. ಅವರಿಗೆ ಸೂಚಿಸಿದರು.
ಬಂಟ್ವಾಳ ತಾ.ಪಂ.ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಂಟ್ವಾಳತಾಲೂಕು ಮಟ್ಟದ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ನಿರ್ದೇಶನ ನೀಡಿದ್ದಾರೆ.
ಇದಕ್ಕು ಮೊದಲು ತಾಲೂಕಿನಲ್ಲಿ ಡಿ.ಸಿ.ಮನ್ನಾ ಜಮೀನನ್ನು ಅತಿಕ್ರಮಣಗೊಳಿಸಿರುವುದು,ಇನ್ನು ಕೂಡ ಆರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡದಿರುವ ಬಗ್ಗೆ ಸಬೆಯಲ್ಲಿ ಪ.ಜಾ.ಮತ್ತು ಪಂಗಡ ಸಮಾಜದ ಮುಖಂಡರು ಗಮನಸೆಳೆದು ಚರ್ಚಿಸಿದರು.
ಈ ಹಂತದಲ್ಲಿ ಡಿ.ಸಿ.ಮನ್ನಾ ಜಮೀನಿನಲ್ಲಿ ಶಾಲೆ,ಸರಕಾರಿ ಕಟ್ಟಡ ನಿರ್ಮಿಸಿರುವುದನ್ನು ತೆರವುಗೊಳಿಸಲು ಸಾಧ್ಯವಿಲ್ಲದ ಮಾತು,ಜಿಲ್ಲಾಧಿಕಾರಿಯವರು ಈಗಾಗಲೇ ನೀಡಿರುವ ನಿರ್ದೇಶನದಂತೆ ಲಭ್ಯ ಜಮೀನಿನಲ್ಲಿ ಎರಡುಮುಕ್ಕಾಲು ಸೆಂಟ್ಸ್ ನಂತೆ ಸೈಟ್ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಎ.ಸಿ.ಮದನ್ ಮೋಹನ್ ಸಭೆಗೆ ತಿಳಿಸಿದರು.
ಇದನ್ನು ಬಲವಾಗಿ ಆಕ್ಷೇಪಿಸಿದ ಜನಾರ್ದನ ಬೋಳಂತೂರು, ಜನಾರ್ದನ ಚಂಡ್ತಿಮಾರ್, ಕೇಶವ ನಾಯ್ಕ್ ಅವರು ಈ ಹಿಂದಿನ ಜಿಲ್ಲಾಧಿಕಾರಿ ಮಾಡಿರುವ ಆದೇಶವನ್ನು ಜಾರಿಗೊಳಿಸಬೇಕು, ಒತ್ತುವರಿಯಾಗಿರುವ ಜಮೀನಿಗೆ ಪರ್ಯಾಯ ಸರಕಾರಿ ಜಮೀನನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಪುರಸಭಾ ವ್ಯಾಪ್ತಿಯಲ್ಲಿ ಡಿ.ಸಿ.ಮನ್ನಾ ಜಮೀನು ಎಷ್ಠಿದೆ ಎಂದು ಮಾಹಿತಿ ನೀಡುವಂತೆ ಗಂಗಾಧರ ಪರಾರಿ ಅವರು ಪ್ರಶ್ನಿಸಿದರು.ಕೊನೆಗೆ ಬಂಟ್ವಾಳ ತಾಲೂಕಿನಲ್ಲಿ ಲಭ್ಯವಿರುವ ಡಿ.ಸಿ.ಮನ್ನಾ ಜಮೀನನ್ನು ಗುರುತಿಸಿ ಅತಿಕ್ರಮಣ ಮತ್ತು ಉಳಿಕಯೆ ಸಂಪೂರ್ಣ ವರದಿ ಸಲ್ಲಿಸುವಂತೆ ಎ.ಸಿ.ಯವರು ತಹಶೀಲ್ದಾರ್ ರಶ್ಮೀ ಅವರಿಗೆ ಸೂಚಿಸಿದರು.ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಬಂಟ್ವಾಳ ತಾಲೂಕಿನಲ್ಲಿ ಸರ್ವೇಯರ್ ಕೊರತೆಯಿಂದ ರಸ್ತೆ,ಭೂನ್ಯಾಯ ಸಹಿತ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಸರ್ವೇಕಾರ್ಯಕ್ಕೆ ತೊಂದರೆಯಾಗುತ್ತಿದೆ.ಜನಸಾಮಾನ್ಯರು ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಭೆಯ ಗಮನಸೆಳೆದರು.
ಸಭೆಯಲ್ಲಿ ಸಾರಿಗೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ವಿಶ್ವನಾಥ ಚಂಡ್ತಿಮಾರ್ ಸಭೆಯ ಗಮನಕ್ಕೆ ತಂದರು. ತಹಸೀಲ್ದಾರ್ ರಶ್ಮಿ ಎಸ್.ಆರ್., ತಾಪಂ ಇಒ ರಾಜಣ್ಣ ಉಪಸ್ಥಿತರಿದ್ದರು ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಶ್ರೀ ಸ್ವಾಗತಿಸಿ, ವಂದಿಸಿದರು.
Be the first to comment on "ಡಿ.ಸಿ.ಮನ್ನಾ ಭೂಮಿ ಅತಿಕ್ರಮಣ: ವರದಿ ನೀಡುವಂತೆ ತಹಸೀಲ್ದಾರ್ ಗೆ ಎ.ಸಿ. ಸೂಚನೆ"