ಬಂಟ್ವಾಳ: ಮಂಗಳೂರಿನ ಬಿರುವೆರ್ ಕುಡ್ಲ (ರಿ) ಸಂಘಟನೆಯ ಮಹಾಸೇವಾ ಯೋಜನೆಯಡಿ ಬಂಟ್ವಾಳ ಭಂಡಾರಬೆಟ್ಟು ಸಮೀಪ ಆರ್ಥಿಕವಾಗಿ ಹಿಂದುಳಿದ ಲಿಂಗಪ್ಪ ಮತ್ತು ಮೋಹಿನಿ ದಂಪತಿಗೆ ನೂತನ ಸುಸಜ್ಜಿತ ಮನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ನಳಿನ್, ಸ್ವಾಮಿ ವಿವೇಕಾನಂದ ಮತ್ತು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಸಿದ್ಧಾಂತ ಹಾಗೂ ಚಿಂತನೆಯನ್ನು ಉದಯ ಪೂಜಾರಿ ನೇತೃತ್ವದ ಬಿರುವೆರ್ ಕುಡ್ಲ ಅನುಷ್ಠಾನ ಮಾಡುತ್ತಿದ್ದು, ಸರ್ಕಾರ ಮಾಡಬೇಕಾದ ಕೆಲಸವನ್ನು ಬಿರುವೆರ್ ಕುಡ್ಲ ಮಾಡುತ್ತಿದ್ದು, ಇದು ಸಮಾಜ ಮೆಚ್ಚುವ ಕಾರ್ಯ. ನಾಲ್ಕು ಯುವಕರು ಒಟ್ಟಾಗಿ ಸೇರಿದರೆ ಮನೆ ನಿರ್ಮಾಣ, ಆಂಬುಲೆನ್ಸ್ ನಂಥ ಸೇವಾ ಕಾರ್ಯಗಳು ಆಗುತ್ತವೆ ಎಂಬುದಕ್ಕೆ ಸಂಘಟನೆ ನಿದರ್ಶನವಾಗಿದ್ದು, ಯುವಕರು ಸಂಸ್ಕಾರವಂತರಾದರೆ, ಇಂಥ ಜನೋಪಯೋಗಿ ಕಾರ್ಯಗಳನ್ನು ನಡೆಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಸಂಘಟನೆ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಮಾತನಾಡಿ, ಬಿರುವೆರ್ ಕುಡ್ಲ, ಕೇಂದ್ರ ಸಮಿತಿ, ಮಂಗಳೂರು ವತಿಯಿಂದ ಸ್ಥಳೀಯರ ಸಹಕಾರದೊಂದಿಗೆ ನೀಡುತ್ತಿರುವ 5ನೇ ಮನೆ ಇದಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶುಭ ಹಾರೈಸಿ, ಸೇವಾ ಮನೋಭಾವವನ್ನು ಶ್ಲಾಘಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ವಸಂತ ಪೂಜಾರಿ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಆದರ್ಶ್, ಮೆಲ್ವಿನ್ ಡಿಸೋಜ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಮನೆ ನಿರ್ಮಾಣದ ಕುರಿತು ಸಹಕರಿಸಿದ ಲಕ್ಷ್ಮಣ ಶೆಟ್ಟಿ ಮತ್ತು ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಸಂಘಟನಾ ಅಧ್ಯಕ್ಷ ಚಂದ್ರಶೇಖರ್ ನೆರವು ನೀಡಿದವರ ವಿವರ ನೀಡಿದರು. ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಿರುವೆರ್ ಕುಡ್ಲ ಸಂಘಟನೆಯಿಂದ ಸಮಾಜ ಮೆಚ್ಚುವ ಕಾರ್ಯ: ಸಂಸದ ನಳಿನ್ ಕುಮಾರ್ ಕಟೀಲ್"