ಬಂಟ್ವಾಳ: ಸರ್ಕಾರದ ಸೂಚನೆಯಂತೆ ಬಂಟ್ವಾಳ ತಹಸೀಲ್ದಾರ್ ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮ ಅಮ್ಮುಂಜೆ ಗ್ರಾಪಂ ಸಭಾಂಗಣದಲ್ಲಿ ಶನಿವಾರ ನಡೆಯಿತು. ಈ ಸಂದರ್ಭ 25 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಒಂದನ್ನು ವಿಲೇವಾರಿ ಮಾಡಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಪಂ ಅಧ್ಯಕ್ಷ ವಾಮನ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರೇಡ್ 2 ಪ್ರಭಾರ ತಹಸೀಲ್ದಾರ್ ಕವಿತಾ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ತೆಂಗಿನ ಗಿಡವನ್ನು ನೆಡಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಪ್ರಮೀಳಾ, ಗ್ರಾಮ ಪಂಚಾಯತ್ ಸದಸ್ಯರಾದ ಕಾರ್ತಿಕ್ ಬಲ್ಲಾಳ್, ರಾಧಾಕೃಷ್ಣ ತಂತ್ರಿ, ರವೀಂದ್ರ ಸುವರ್ಣ, ರೋನಾಲ್ಡ್ ಡಿ.ಸೋಜ, ಲೀಲಾವತಿ, ಭಾಗೀರಥಿ, ಪೌಝಿಯಾ, ಲೀಲಾವತಿ, ಲಕ್ಷ್ಮೀ, ಟಿಎಚ್.ಅಬ್ದುಲ್ ರಝಾಕ್, ನೆಫೀಸಾ, ಸರ್ವೆ ಇಲಾಖೆಯ ಎಡಿಎಲ್ಆರ್ ರೇಣುಕಾ ನಾಯಕ್ , ಉಪತಹಶೀಲ್ದಾರ್ ನರೇಂದ್ರ ನಾಥ್ ಭಟ್ ಮಿತ್ತೂರು, ಪ್ರಭಾರ ಕಂದಾಯ ನಿರೀಕ್ಷಕ ಧರ್ಮಸಾಮ್ರಾಜ್ಯ, ಸಿಬ್ಬಂದಿ ಗ್ರೆಟ್ಟಾ, ಅಮ್ಮುಂಜೆ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ ಉಪಸ್ಥಿತರಿದ್ದರು. ಗ್ರಾಮಕರಣಿಕ ಜಗದೀಶ ಶೆಟ್ಟಿ ಸ್ವಾಗತಿಸಿದರು. ಉಪತಹಸೀಲ್ದಾರ್ ದಿವಾಕರ ಮುಗುಳ್ಯ ವಂದಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಮನೆ ನಂಬರ್ ದೊರಕದೇ ಇರುವುದು, ಅಕ್ರಮವಾಗಿ ಜಮೀನು ಅಗೆದ ಕಾರಣ ಮನೆ ಬೀಳುವ ಸ್ಥಿತಿಯಲ್ಲಿ ಇರುವುದರ ಕುರಿತು ದೂರುಗಳು ಬಂದವು. ಮನೆ ಬೀಳುವ ಸ್ಥಿತಿಯಲ್ಲಿದ್ದು ಪರಿಶೀಲನೆ ನಡೆಸಿ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಬಿಸಿರೋಡಿನಿಂದ ಅಮ್ಮುಂಜೆ ಮಾರ್ಗವಾಗಿ ಪೊಳಲಿ ಸಂಪರ್ಕಕ್ಕೆ ಸರಕಾರಿ ಬಸ್ ಒದಗಿಸಬೇಕು, ಕರಿಂಯಂಗಳದಲ್ಲಿರುವ ಗ್ರಾಮ ಕರಣಿಕ ರ ಕಚೇರಿಯ ನ್ನು ಅಮ್ಮುಂಜೆ ಗ್ರಾ.ಪಂ.ಕಚೇರಿಗೆ ವರ್ಗಾಯಿಸಬೇಕು ಎಂಬ ಬೇಡಿಕೆ ಬಂತು.ಗ್ರಾಪಂ ಮಾಜಿ ಸದಸ್ಯ ಅಬುಬಕ್ಕರ್ ಅಮ್ಮುಂಜೆ ಸಹಿತ ಹಲವರು ವಿವಿಧ ಬೇಡಿಕೆಗಳನ್ನು ಮಂಡಿಸಿದರು.
Be the first to comment on "ಅಮ್ಮುಂಜೆ ಗ್ರಾಪಂನಲ್ಲಿ ಬಂಟ್ವಾಳ ತಹಸೀಲ್ದಾರ್ ಗ್ರಾಮವಾಸ್ತವ್ಯ"