? ಎಸ್ ನಾವೂರ್
ಲೇಖನ: ಎಸ್. ನಾವೂರ್
ಭಾರತ ಸಂಸ್ಕೃತಿ, ಆಚಾರ ವಿಚಾರ ಆಚರಣೆಗಳ ಕಣಜ. ಹಬ್ಬ,ಶುಭ ದಿನಗಳನ್ನು ಸಂಪ್ರದಾಯ ಪದ್ದತಿಯನ್ನು ಪ್ರತಿಯೊಂದು ಆಯಾಮದಲ್ಲಿ ಅಳವಾಗಿ ತುಲನೆ ಮಾಡಿದರೆ ಅದೆಷ್ಟೋ ವೈಜ್ಞಾನಿಕ, ಸಾಂಸಾರಿಕ ಸಂಬಂಧಗಳನ್ನು ಬೆಸೆದುಕೊಂಡ ಭಾವಗಳನ್ನು ಮುತ್ತಿಕೊಂಡಿರುವ ಸತ್ಯಗಳು ಒಳನೋಟಕ್ಕೆ ಹಿಡಿದ ಕನ್ನಡಿಗಳು.
ಹೀಗೆಯೇ ಸುಮ್ಮನೆ ಕೆದಕುತ್ತ ಮೆಲುಕು ಹಾಕುತ್ತ ಹೋದಂತೆ ಅದೆಷ್ಟೋ ಆಚರಣೆಗಳು ಕಣ್ಣ ಮುಂದೆ ಬರಬಹುದು. ಸದ್ಯಕ್ಕೆ ಅಂದು ಹೆಚ್ಚು ಆಚರಣೆಯಲ್ಲಿದ್ದು ಇಂದು ಜಾಗತೀಕರಣ,ಯಂತ್ರೋಪಕರಣ,ವೈಜ್ಞಾನಿಕತೆಯ ವಿವಿಧತೆಯ ಭರಾಟೆಯಲ್ಲಿ ನಾವು ಮರೆತು ಹೋದ, ಅಳಿವಿನಂಚಿನ ಕಡೆ ಕಾಲು ಹಾಕಿದರೂ “ಹಳೆಯದರಲ್ಲಿ ಹೊಸತು ಇದೆ ತಪ್ಪಿದರೆ ತಪ್ಪದು ಒದೆ ಎಂಬ ಅಲೋಚನೆಯಲ್ಲಿ, ಸಂಪ್ರದಾಯದ ಆಚರಣೆಯಲ್ಲಿ ಕೆಲವೊಂದು ಕಡೆ ಆಚರಣೆಯಲ್ಲಿ ಇರುವ, ಆಚರಣೆ “ಹೊಸತು” ತುಳು ಭಾಷೆಯಲ್ಲಿ ( ಪೊಸತ್,ಪುದ್ದರ್). ಪ್ರಕೃತಿ ಹಾಗೂ ಬದುಕು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದು ಪ್ರಕೃತಿಯಲ್ಲಿ ನಾವು ಬದುಕಿಕೊಂಡಾಗ ನಮಗೆ ನಮ್ಮ ಅರಿವಾದ ನಾವು ಅರಿವ ಸತ್ಯಗಳು.
ಹೀಗೆ ಪ್ರಕೃತಿ ನಮಗೆ ಕೊಟ್ಟದನ್ನು ನಾವು ಸ್ವೀಕರಿಸಿ ನಮ್ಮಸರ್ವ ರೀತಿಯ ಬೆಳವಣಿಗೆಯು ರೂಪುಗೊಳ್ಳುವುದು. ಸಂಪ್ರದಾಯ,ಧಾರ್ಮಿಕ ಆಚರಣೆಯ ಪದ್ದತಿಯಲ್ಲಿ ವಿವಿಧ ವಿಧದ ತಿಂಗಳು ಗಳಿಗೆ ವಿವಿಧ ಮಹತ್ವವು ನಂಬಿಕೆಯೊಳಗೆ ನೀಡಿದೆ. ಅವುಗಳಲ್ಲಿ ಶ್ರಾವಣ ತಿಂಗಳು ಕೂಡ ಒಂದು ( ಸೋಣ )ಶ್ರಾವಣ ತಿಂಗಳು ಬಹಳ ಪವಿತ್ರವಾದ ತಿಂಗಳು ಸರ್ವ ರೀತಿಯ ಶುಭ ಕಾರ್ಯದ ಪವಿತ್ರ ತಿಂಗಳು,ತುಳುನಾಡಿನ ಕೆಲವು ಕಡೆ ತುಳುನಾಡಿನ ಆರಾಧನೆಯಲ್ಲಿರುವ ದೈವಗಳಿಗೆ ಶ್ರಾವಣ ತಿಂಗಳಲ್ಲಿ ಪ್ರತಿ ದಿನ ದೀಪ ಹಚ್ಚುವ ಜೊತೆಗೆ ವಿಶೇಷವಾದ ಧಾರ್ಮಿಕ ಆಚರಣೆಗಳು,ದೇವಸ್ಥಾನಗಳಲ್ಲಿ,ವಿಶೇಷವಾದ ಪೂಜೆ ಪುರಸ್ಕಾರಗಳು, ಅನ್ನದಾನ ಸೇವೆಗಳು ಹೀಗೆ ಶ್ರಾವಣ ತಿಂಗಳನ್ನು ದೇವರು ತಿಂಗಳೆಂದು ಅದಮ್ಯವಾದ ಭಕ್ತಿಭಾವದಿ ಭಕ್ತರು ಸ್ವೀಕರಿಸುವ ಕಟ್ಟು ಕಟ್ಟಳೆಗಳನ್ನು ಗಮನಿಸಿರಬಹುದು. ಈ ಶ್ರಾವಣ ತಿಂಗಳ ಆರಂಭ (ಸಂಕ್ರಮಣ ಸಂಕ್ರಾಂತಿ)ಯ ಮರುದಿನದಿಂದ ಆರಂಭ, ದೇವಿಗೆ ಪವಿತ್ರ ದಿನಗಳಲ್ಲಿ ಒಂದಾದ ನವರಾತ್ರಿ ದಿನಗಳು, ದಸಾರದ ದಿನಗಳು ಹಾಗೂ ದೀಪಾವಳಿ ಹಬ್ಬದ ಆರಂಭದ ಮೊದಲು ಅಂದರೆ ಪುಣ್ಯ ತೀರ್ಥವಾಹಿನಿಯಾದ ಕಾವೇರಿ ತೀರ್ಥೋಧ್ವವಾದ ಕಾವೇರಿ ಸಂಕ್ರಮಣದ ವರೆಗೆ ನಡೆಯುವ, ವಿಶಿಷ್ಟವಾಗಿ ಭೂಮಾತೆಯ ಅರಾಧನೆ,ಪ್ರಕೃತಿ ಮಾತೆಯ ಆರಾಧನೆ,ನಮಗೆ ಪ್ರಕೃತಿ ಕೊಡುವ ಸರ್ವ ವಸ್ತುಗಳ ಆರಾಧನೆ,ವಿಶೇಷವಾಗಿ ಕೃಷಿ ಬದುಕು, ಭತ್ತ ಕೇವಲ ಬೆಳೆದು ತಿನ್ನುವ ಆಹಾರಗಳು ಮಾತ್ರವಲ್ಲ ಅದು,ಉಸಿರು ಇರುವ ವರೆಗೆ ಹಸಿವು ನೀಗಿಸಿ ಉಸಿರಾಡುವಂತೆ ಮಾಡುವ ಆಹಾರದ ಮೂಲಗಳನ್ನು ಭಕ್ತಿ ಭಾವದಿ ಪೂಜಿಸಿ ಆರಾಧಿಸಿ,ಗದ್ದೆಯಿಂದ ಕದಿರು (ಕುರಲ್ ) ತಂದು ಫಲ ಬರುವ ವಸ್ತುಗಳೊಂದಿಗೆ ಹೊಸ ಕದಿರನ್ನು ಮನೆ ತುಂಬಿಸುವ ಸಂಪ್ರದಾಯದಲ್ಲಿ ಅಡಗಿದೆ,
ಗೌರವಿಸುವ,ಆರಾಧಿಸುವ ಸಂಪ್ರದಾಯ, ಆಚಾರ ವಿಚಾರಗಳು, ಪ್ರಕೃತಿಯ ಉಳಿವಿನ ಮಹತ್ವ,ಅವುಗಳ ಪ್ರಾಮುಖ್ಯತೆಯ ಮಹತ್ವ ಜೊತೆಗೆ,ಅಕ್ಷರ ಜ್ಞಾನ ನಮ್ಮ ಹಿರಿಯರಿಗೆ ಕಡಿಮೆ ಇದ್ದರೂ ಬದುಕು ಬದುಕಿಸುವ ಜ್ಞಾನದಲ್ಲಿ ಪಾಂಡಿತ್ಯ ಹೊಂದಿದ ಜ್ಞಾನ ಗಳು ಬದುಕಲು ಬದುಕಿಸಲುಬೇಕಾಗುವ ಸಲಹೆಗಳು ಪ್ರಕೃತಿಯ ಶಿಕ್ಷಣಗಳು ಎಂಬುದು ಹಿರಿಯರೆ ಮೊದಲೇ ತಿಳಿದಿತ್ತು ಎಂಬುದು ಸಂಪ್ರದಾಯ ಆಚರಣೆಯೊಳಗೆ ಅಡಿಗಿದ ಮಾಹಿತಿಗಳು. ಉಪಕಾರ ಸ್ಮರಣೆ ಅನ್ನೋದು ನಮ್ಮ ಮಾನವೀಯ ಮೌಲ್ಯಗಳಲ್ಲಿ ಅಂಶಗಳು ಎಂಬುದು ಅರಿಯಬೇಕಾದ ಸತ್ಯಗಳು ಸಂದೇಶಗಳು. ಕದಿರು ಕಟ್ಟಿದ ದಿನ ಆಥಾವ ಅವುಗಳ ನಂತರ, ನವರಾತ್ರಿ ಹಬ್ಬ ಅಥಾವ ದೀಪಾವಳಿ ಹಬ್ಬಗಳ ದಿನಗಳಲ್ಲಿ ( ಆಯಾಯ ಪ್ರದೇಶದ ನಂಬಿಕೆಯೊಳಗೆ ನಿಗದಿಯಾದ ದಿನಗಳಿಗೆ ಸಂಬಂಧ ಪಟ್ಟ ಹಾಗೆ) ಹೊಸತು, ಪುದ್ದರ್ ಪೊಸತ್,)
ಪೊಸತ್ ಅಂದರೆ ಕನ್ನಡದ ನವ,ತುಳುವಿನ ಪೊಸತ್ ಕನ್ನಡದ ಹೊಸತು,ಪುದ್ದರ್ ಕೂಡ ತುಳುವಿನ ಪೊಸತ್.ದೂರದೂರ ಇದ್ದ
ಕುಟುಂಬದ ಹಿರಿಯರು ಕಿರಿಯರು ರಕ್ತ ಸಂಬಂಧಿಗಳು ತಮ್ಮ ಮೂಲ ಹಿರಿಯರ ಮನೆಯಲ್ಲಿ ಒಟ್ಟು ಸೇರಿ, ಏಳು ಬಗೆ ಒಂಬತ್ತು ಬಗೆ ಐದು ಬಗೆಯ ತರಕಾರಿ ಖ್ಯಾದ ವಿಶೇಷವಾಗಿ ಅಲ್ಲಿ ಮೊದಲ ಪ್ರಾಧಾನ್ಯತೆಯಲ್ಲಿ ಕೆಸು,ಅರಿವೆ,ಮುಳ್ಳುಸೌತೆಯನ್ನು ಒಳಗೊಂಡ ವಿವಿಧ ಬಗೆಯ ತರಕಾರಿ ಖಾದ್ಯದ ತಯಾರಿ, ಆಡುಗೆಯ ಕಾರ್ಯದಲ್ಲಿ ಒಟ್ಟು ಕುಟುಂಬದ ಸದಸ್ಯರ ಬಾಯಿ ತುಂಬಾ ಯೋಗ ಸಮಾಚಾರ, ಮಕ್ಕಳ ಓಡಾಟ,ಹಿರಿಯರ ಅನುಭವ ಮಾತಿನ ಮಂಟಪ,ಬದುಕಿನ ಪಯಣಗಳ ಬಗ್ಗೆ ನೋಟ ಮುಂದಿನ ಹಾಗೂ ಹೋಗುಗಳ ವಿಮರ್ಶೆ ಮಾತುಕತೆ,ಹೀಗೆ ಹೃದಯದ ಭಾವಗಳಿಗೆ ಮಾತಿನ ರೂಪಗಳು ರಕ್ತ ಸಂಬಂಧ. ಭಾವಗಳನ್ನು ಗಟ್ಟಿಗೊಳಿಸುತ್ತದೆ.
ಬಾಂಧವ್ಯ ಬೆಸೆಯುತ್ತವೆ: ಹೊಸ ಊಟಕ್ಕೆ ತಯಾರಾದ ಹೊತ್ತಿನಲ್ಲಿ ದೈವ ದೇವರ ಸ್ಮರಣೆ ದೂರಾದ ಹಿರಿಯರ ನೆನಪುಗಳೊಂದಿಗೆ,ಕುಟುಂಬದ ಯಜಮಾನ ನೀಡುವ ಹೊಸ ತೆನೆಗೆ ಮಿಶ್ರಣ ಮಾಡಿದ ತೆಂಗಿನ ಕಾಯಿಯ ಹಾಲನ್ನು ಲೋಟದಲ್ಲಿ ಹಿಡಿದುಕೊಂಡು ಹಿರಿಯರ ಕಾಲು ಹಿಡಿದು ಅಥಾವ ಮಾತಿನಲ್ಲಿ ಹಿರಿಯರು ಕಿರಿಯರಲ್ಲಿ ಕಿರಿಯರು ಹಿರಿಯರಲ್ಲಿ ಒಂದೇ ಹೊಸತೆನೆಯ ಹಾಲು ಕುಡಿಯುತ್ತೇವೆ ಎಂದು ಒಟ್ಟಿಗೆ ಹಾಲು ಕುಡಿಯುವುದು, ಬಳಿಕ ತಾಯಾರು ಮಾಡಿದ ಹೊಸ ಅಕ್ಕಿಯ ಊಟವನ್ನು ಒಂದೇ ಸೂರಿನಡಿಯಲ್ಲಿ ಒಂದು ಕುಟುಂಬದವರು ಊಟ ಮಾಡುವುದು, ತುತ್ತುಗಳನ್ನು ಬಾಯಿಗೆ ಇಡುವುದು, ಅತಿಥಿಗಳಿಗೆ ಉಣ ಬಡಿಸುವುದು ಅಲ್ಲಿ ತುಂಬುವುದು ಸಂಬಂಧ ಭಾವದ ಕೊಂಡಿಗಳು, ಮಾನವೀಯ ಮೌಲ್ಯಗಳು, ಕಷ್ಟ ಸುಖ ಏನೇ ಇರಲಿ ಹಂಚಿ ತಿನ್ನುವ ಭಾವಗಳು ಬಾಂಧವ್ಯಗಳು,ವಿಶೇಷವಾಗಿ ಕುಟುಂಬದಲ್ಲಿ ಮದುವೆ ಸಮಾರಂಭ ನಡೆದರೆ ಮದುವೆಯಾದ ವರುಷದಲ್ಲಿ ಬರುವ ಮೊದಲ ಹೊಸತು ಗಂಡಿನ ಕಡೆ ಹೆಣ್ಣಿನ ಕಡೆಯ ಎರಡು ಕಡೆಯ ಆಚರಣೆಗಳು ಅಷ್ಟು ಪರಿಚಯದವಿಲ್ಲದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಸಂಬಂಧ ಭಾವಗಳನ್ನು ಬಾಂಧವ್ಯದೊಳಗೆ ಜೋಡಿಸುತ್ತದೆ.ಮನೆ ಕುಟುಂಬದೊಳಗೆ ಮನಸ್ಸುಗಳ ಸಂಗಮವಾಗಿ ಬೆಸೆಯುವ ಕುಟುಂಬದ ನೆಮ್ಮದಿ ಆರೋಗ್ಯವನ್ನು ಕೂಡ ಸಮತೋಲನದಲ್ಲಿ ಇಡುವ ಆಚರಣೆಯಲ್ಲಿ ಒಂದು.
ಕೊನೆಯ ಮಾತು: ಆಧುನಿಕತೆಯ ಹರಟೆಯಲ್ಲಿ ನಾವು ನಮ್ಮನ್ನೇ ಮರೆತ್ತಿರುವ ಸಮಯದಲ್ಲಿ ಆಗೊಮ್ಮೆ ಈಗೊಮ್ಮೆ ಎಚ್ಚರಿಸುವುದು ಕೌಟುಂಬಿಕ ಜೀವನದ ಪಾಠವನ್ನು ಹೇಳಿಕೊಡುವುದು ,ವಿಶಾಲ ದೃಷಿಕೋನದಿಂದ ನೋಡಿದಾಗ ನಮ್ಮ ಮಣ್ಣ ಕಣದಲ್ಲಿ ಅಡಗಿರುವ ಸಮಾಜ ಒಪ್ಪುವ ಆಚರಣೆಗಳು, ಸಂಪ್ರದಾಯ ಸಂಸ್ಕೃತಿಗಳು.ಅಂದು ಪುಟ್ಟ ಮನೆಯಾದರೂ ಕಷ್ಟ ಇರಲಿ ಸುಖವಿರಲಿ ಒಂದೇ ಸೂರಿನಡಿಯಲ್ಲಿ ಕುಳಿತು ಅದೆಷ್ಟೋ ಮನೆ ಮಂದಿ ಒಟ್ಟಿಗೆ ಊಟ ಮಾಡುತ್ತಿದ್ದ ಕಾಲವೊಂದಿತ್ತು.ಆದರೆ ಕೆಲವು ಸ್ವಾರ್ಥ,ಕೆಲವು ಅನಿವಾರ್ಯತೆಯಿಂದಾಗಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬವಾಗಿ ಮಾರ್ಪಟ್ಟವು. ಆದರೆ ಇಂತಹ ಕುಟುಂಬ ಸಮ್ಮೀಳನದ, ಒಳ ಚಿಂತನೆಯ ಸಂದೇಶ ಹೊಂದಿದ ಹಳೆಯ ಆಚರಣೆಗಳು ಇನ್ನಷ್ಟು ಮನೆ ಮನಗಳಲ್ಲಿ ನೆಲೆ ನಿಂತರೆ,ಪರಿವರ್ತನೆಯ ರಾಯಭಾರಿಗಳು.
ಅಕ್ಷರ ಜ್ಞಾನ ಪಡೆದಷ್ಟು ಬದುಕುವ ಜ್ಞಾನ ಕಡಿಮೆಯಾಗುತ್ತಿರುವಾಗ, ಯಾಂತ್ರಿಕ ಬದುಕಿನಲ್ಲಿ ಸಂಸ್ಕೃತಿ ಸಂಸ್ಕಾರ ಮರೆತಾಗ,ಕೌಂಪ್ಯೂಟರ್ ಬಳಕೆ ಹೆಚ್ಚದಂತೆ ಕಳೆದುಕೊಂಡ ಕೌಟುಂಬಿಕ ಬದುಕಿನ ಜೀವಸತ್ವ, ಮೊಬೈಲ್ ಬಳಕೆ ಹೆಚ್ಚದಂತೆ ಮೌಲ್ಯ ಕಳೆದುಕೊಂಡ ಮಾನವೀಯ ಸಂಬಂಧಗಳು,ಸಾರ ಕಳೆದುಕೊಂಡ ಸಂಸಾರಗಳು. ಭಾರತದ ಶ್ರೀಮಂತಿಕೆಯನ್ನು ವಿಶಾಲವಾಗಿ ಚಾಚಿಕೊಂಡಿರುವ ಅಂಶಗಳಲ್ಲಿ ಭಾರತದ ಕುಟುಂಬ ಪದ್ದತಿಯು ಕೂಡ ಒಂದು. ಇಷ್ಟು ಶ್ರೀಮಂತವಾದ ಕುಟುಂಬ ವ್ಯವಸ್ಥೆ ತನ್ನ ಶ್ರೀಮಂತಿಕೆಯನ್ನು ಇಂದಿಗೂ ಗಟ್ಟಿಯಾಗಿ ಹಿಡಿದುಕೊಂಡಿದೆ ಅಂದರೆ, ದೇಶದಲ್ಲಿ ಹಂಚಿರುವ ಇಂತಹ ಆಚರಣೆಗಳು.
ಇಂತಹ ಆಚರಣೆಗಳು ಕೇವಲ ಆಚರಣೆ ಮಾತ್ರವಲ್ಲ ಅವುಗಳ ಹಿಂದೆ ಇರುವುದು ಸ್ವಚ್ಚ ಸಮಾಜಿಕ ಜವಾಬ್ದಾರಿಗಳು. ಇಂದಿಗೂ ಮುಂದೆಯೂ ಇಂತಹ ಆಚರಣೆಯ ಸಮಾಜಿಕತೆಯ ಅಡಿಯಲ್ಲಿ ಬಹುಮುಖ್ಯ ಪಾತ್ರಗಳ ನಿರ್ವಹಿಸುವುದು,ಹಳಿ ತಪ್ಪಿಸಿಕೊಂಡ ಕೌಟುಂಬಿಕ ವ್ಯವಸ್ಥೆ,ಮರೆತ ಮಾನವೀಯ ಮಾಲ್ಯ,ಕ್ಷಣದ ಖುಷಿಗಾಗಿ ಬದಲಾವಣೆಯ ದಾರಿ ಹಿಡಿದ ಸಮಾಜವನ್ನು ಕೆತ್ತಲು ತಿದ್ದಲು ಒಂದಿಷ್ಟು ಸಮಾಜದಲ್ಲಿ ನಮ್ಮನ್ನು ನಾವೇ ಅರಿತುಕೊಳ್ಳಲು.
Be the first to comment on "ಆಚರಣೆಗಳಲ್ಲಿರುವ ಒಳಚಿಂತನೆಗಳು ಮನೆ, ಮನಗಳಲ್ಲಿ ನೆಲೆಯಾಗಲಿ"