ಬಂಟ್ವಾಳ: ಸಜಿಪನಡು ಗ್ರಾಮದ ಕಂಚಿನಡ್ಕದವು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಂಟ್ವಾಳ ಪುರಸಭೆ ಹಸಿಕಸ ಸಾಗಿಸುವುದನ್ನು ವಿರೋಧಿಸಿ ಸಜಿಪನಡು ಗ್ರಾಮಪಂಚಾಯತ್ ನೇತೃತ್ವದಲ್ಲಿ ಬಂಟ್ವಾಳ ಪುರಸಭೆಯ ಮುಂಭಾಗ ಗುರುವಾರ ವಿಶಿಲ್ ಮಾರ್ಚ್ ನೊಂದಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಫೌಝಿಯಾ ಬಾನು, ಪುರಸಭೆ ಮುಂದೆ ಪ್ರತಿಭಟನೆ ನಮ್ಮ ಪ್ರಥಮ ಹೆಜ್ಜೆಯಾಗಿದ್ದು, ಇದಕ್ಕೆ ಸ್ಪಂದಿಸದಿದ್ದರೆ, ಬಂಟ್ವಾಳ ಮತ್ತು ಮಂಗಳೂರು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ, ಅದಕ್ಕೂ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದು, ಯಾವುದೇ ಕಾರಣಕ್ಕೂ ಬಂಟ್ವಾಳದ ತ್ಯಾಜ್ಯವನ್ನು ಕಂಚಿನಡ್ಕಪದವಿಗೆ ತರಲು ಬಿಡುವುದಿಲ್ಲ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಗ್ರಾಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ನಾಸಿರ್ ಸಜಿಪ, ಗ್ರಾಪಂ ಉಪಾಧ್ಯಕ್ಷ ಎಸ್.ಎನ್. ಅಬ್ದುಲ್ ರಹಿಮಾನ್, ಪ್ರಮುಖರಾದ ಸುರೇಶ್ ಬಂಗೇರ ಹಾಗೂ ಸ್ಥಳೀಯ ನಿವಾಸಿ ಮಹಿಳೆಯರು ಮಾತನಾಡಿ ಕಸವನ್ನು ರಾಶಿ ಹಾಕುವುದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿ,ಮುಂದಕ್ಕೆ ಏನಾದರೂ ತೊಂದರೆಯಾದರೆ ಪುರಸಭೆಯೇ ಹೊಣೆ ಎಂದರು. ಗ್ರಾಪಂ ಸದಸ್ಯರಾದ ಇಸ್ಮಾಯಿಲ್ ಗೋಳಿಪಡ್ಪು, ಸುಶೀಲ, ಶೋಭಾ, ಬಬಿತಾ, ಮಮ್ತಾಝ್, ಬೀಫಾತುಮ್ಮ ಪ್ರಮುಖರಾದ ಐವನ್, ರಶೀದ್ ಸಜಿಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಬಂಟ್ವಾಳ ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರನಾಥ ಭಟ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಬಂಟ್ವಾಳ ಎಸ್.ಐ. ಅವಿನಾಶ್ ನೇತೃತ್ವದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.
Be the first to comment on "ಸಜಿಪನಡು ಗ್ರಾಪಂ ನೇತೃತ್ವದಲ್ಲಿ ಬಂಟ್ವಾಳ ಪುರಸಭೆ ಮುಂಭಾಗ ಸೀಟಿ ಊದಿ, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ"