ಬಂಟ್ವಾಳ: ಬಂಟ್ವಾಳ ತಾಲೂಕಿನ ಹಲವೆಡೆ ಪ್ರಾಕೃತಿಕ ವಿಕೋಪದಿಂದ ಹಾನಿಗಳುಂಟಾಗಿದ್ದು, ಇದನ್ನು ವಿಶೇಷ ಪ್ಯಾಕೇಜ್ ಮೂಲಕ ಶೀಘ್ರಾನುಶೀಘ್ರ ಯುದ್ಧೋಪಾದಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
ಬುಧವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳೆರೋಗ ಪರಿಹಾರವೇ ಕಳೆದ ಎರಡು ವರ್ಷಗಳಲ್ಲಿ ಜನರ ಕೈಗೆ ಬಂದಿಲ್ಲ. ಇನ್ನು ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದವರಿಗೂ ಇದೇ ರೀತಿ ವಿಳಂಬ ಧೋರಣೆ ಮಾಡದೆ ವಿಶೇಷ ಪ್ಯಾಕೇಜ್ ಅನ್ನು ಶೀಘ್ರ ಒದಗಿಸಬೇಕು ಎಂದು ಒತ್ತಾಯಿಸಿದರು. ತಾನು ಸಚಿವನಾಗಿದ್ದಾಗ ಇಂಥದ್ದೇ ಸಂದರ್ಭದಲ್ಲಿ ನರಿಕೊಂಬು ಮತ್ತು ಅನಂತಾಡಿ ಗ್ರಾಮದ ಜನರಿಗೆ 24 ತಾಸಿನೊಳಗೆ ಪರಿಹಾರವನ್ನು ಜನರ ಕೈಗೆ ತಹಸೀಲ್ದಾರ್ ಮೂಲಕ ಒದಗಿಸುವ ಕೆಲಸ ಮಾಡಿದ್ದನ್ನು ಜ್ಞಾಪಿಸಿದ ರೈ, ಯಾರಿಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ಇಲಾಖಾಧಿಕಾರಿಗಳು ಸೂಕ್ತ ಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದವರಿಗೆ ಪರಿಹಾರವನ್ನು ತುರ್ತಾಗಿ ಒದಗಿಸುವಂತೆ ಆಗ್ರಹಿಸಿದರು. ತಾನು ಈಗಾಗಲೇ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಹಲವೆಡೆ ವ್ಯಾಪಕ ಹಾನಿ ಸಂಭವಿಸಿವೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸುದರ್ಶನ ಜೈನ್, ಅಬ್ಬಾಸ್ ಆಲಿ, ಚಂದ್ರಶೇಖರ ಪೂಜಾರಿ, ಸುರೇಶ್ ಜೋರ, ಆನಂದ ನರಿಕೊಂಬು, ದೇವಪ್ಪ ಕುಲಾಲ್ ಮತ್ತಿತರರು ಇದ್ದರು.
Be the first to comment on "ಬಿರುಗಾಳಿಯಿಂದ ಹಾನಿಗೀಡಾದವರಿಗೆ ಸಮರೋಪಾದಿಯಲ್ಲಿ ಪರಿಹಾರ, ವಿಶೇಷ ಪ್ಯಾಕೇಜ್ ನಡಿ ನೆರವು – ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯ"