ಜಿಲ್ಲಾಧಿಕಾರಿ ತಿಳಿಸಿದರೂ ಸಜಿಪನಡು ಗ್ರಾಮದ ಕಂಚಿನಡ್ಕದವು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಂಟ್ವಾಳ ಪುರಸಭೆಯ ಹಸಿಕಸವನ್ನು ಸಾಗಿಸುತ್ತಿದೆ ಎಂದು ಆರೋಪಿಸಿ, ಸಜಿಪನಡು ಗ್ರಾಮಪಂಚಾಯತ್ ನೇತೃತ್ವದಲ್ಲಿ ಅ.7 ರಂದು ಬಂಟ್ವಾಳ ಪುರಸಭೆಯ ಮುಂಭಾಗ ವಿಶಿಲ್ ಮಾರ್ಚ್ ನೊಂದಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಯಲಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಬಾನು ಹೇಳಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2007-08 ರಿಂದಲೇ ಈ ಘಟಕದ ನಿರ್ಮಾಣಕ್ಕೆ ಗ್ರಾಮಪಂಚಾಯತ್ ನಿಂದ ವಿರೋಧ ವ್ಯಕ್ತವಾಗಿತ್ತು, 8 ಸಲ ಗ್ರಾಮಪಂಚಾಯತ್ ಸಾಮಾನ್ಯಸಭೆಯಲ್ಲಿ, ಐದು ಸಲ ಗ್ರಾಮಸಭೆಯಲ್ಲಿ ತ್ಯಾಜ್ಯ ಘಟಕವನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು.ವಾಹನವನ್ನು ತಡೆದು ಪ್ರತಿಭಟನೆಯನ್ನೂ ನಡೆಸಲಾಗಿತ್ತು. ವಿಧಾನಸಭೆಯಲ್ಲೂ ಕ್ಷೇತ್ರದ ಶಾಸಕರು ವಿಚಾರಮಂಡಿಸಿ ಸಭಾಧ್ಯಕ್ಷರ ತೀರ್ಮಾನದಂತೆ ಬಂಟ್ವಾಳ ಹಾಗೂ ಮಂಗಳೂರು ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಜಿಲ್ಲಾಧಿಕಾರಿಯವರು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯವರಿಗೆ ಒಣಕಸ ಮಾತ್ರ ಹಾಕಬೇಕು ಹಸಿ ಕಸವನ್ನು ಹಾಕಲೇ ಬಾರದು ಎಂದಿದ್ದರು. ಆದರೆ ಬಂಟ್ವಾಳ ಪುರಸಭೆಯಿಂದ ಹಸಿಕಸವನ್ನು ಈ ತ್ಯಾಜ್ಯ ಘಟಕಕ್ಕೆ ತಂದು ಸುರಿದು ಈ ಪರಿಸರದಲ್ಲಿ ದುರ್ನಾತ ಬೀರಿ ಸಾರ್ವಜನಿಕರಿಗೆ ಸಂಕಷ್ಟವನ್ನು ಉಂಟು ಮಾಡುತ್ತಿದ್ದು, ಸಾರ್ವಜನಿಕರ ಆರೋಗ್ಯದಲ್ಲೂ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ದೂರಿದರು. ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪೂರ್ವಾಧ್ಯಕ್ಷ ಮೊಹಮ್ಮದ್ ನಾಸೀರ್ ಮಾತನಾಡಿ, ಗ್ರಾಮಸ್ಥರ ಅಹವಾಲುಗಳಿಗೆ ಮನ್ನಣೆ ಸಿಗದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಗೂ ತ್ಯಾಜ್ಯ ಸಾಗಾಟದ ಲಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಎನ್.ಅಬ್ದುಲ್ ರಹಿಮಾನ್ ಸದಸ್ಯ ಇಸ್ಮಾಯಿಲ್ ಗೋಳಿಪಡ್ಪು ಉಪಸ್ಥಿತರಿದ್ದರು.
Be the first to comment on "ಸಜಿಪನಡು ಗ್ರಾಪಂ ನೇತೃತ್ವದಲ್ಲಿ ಬಂಟ್ವಾಳ ಪುರಸಭೆ ಮುಂಭಾಗ ಅ.7ರಂದು ವಿಶಿಲ್ ಮಾರ್ಚ್"