ಬಂಟ್ವಾಳ: ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯ ವಿರುದ್ಧ ಎಸ್.ಡಿ.ಪಿ.ಐ ಬಂಟ್ವಾಳ ಪುರಸಭಾ ಸಮಿತಿ ವತಿಯಿಂದ ಬಿ.ಸಿ ರೋಡು ಮಿನಿ ವಿಧಾನ ಸೌಧದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ಪಕ್ಷದ ರಾಜ್ಯ ಮುಖಂಡ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿ ಅಡುಗೆ ಅನಿಲ ಬೆಲೆಯನ್ನು ನಿರಂತರವಾಗಿ ಏರಿಸುವುದರ ಮೂಲಕ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದೆ. ಮೊದಲೇ ಕೊರೊನಾ ಸಾಂಕ್ರಾಮಿಕ ರೋಗ ಹಾಗೂ ಲಾಕ್‌ಡೌನ್ ನಿಂದ ತತ್ತರಿಸಿರುವ ಜನಸಾಮಾನ್ಯರ ಬದುಕನ್ನು ಕೇಂದ್ರ ಸರಕಾರವು ಅಗತ್ಯ ವಸ್ತು ಬೆಲೆ ಏರಿಕೆ ಮಾಡುವ ಮೂಲಕ ಇನ್ನಷ್ಟು ಆತಂಕಕ್ಕೆ ದೂಡಿದೆ ಎಂದರು.
ಪಕ್ಷದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್ ಮಾತನಾಡಿ ಬಡ ಜನತೆಯ ನೋವು ಸರಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ದೂರಿದರು. ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಯೂಸುಫ್ ಆಲಡ್ಕ, ಪುರಸಭಾ ಸದಸ್ಯರಾದ ಇದ್ರೀಸ್ ಪಿ.ಜೆ, ಮೂನೀಶ್ ಅಲಿ, ಎಸ್.ಡಿ.ಪಿ.ಐ ಪುರಸಭಾ ಸಮಿತಿ ಸದಸ್ಯ ಇಕ್ಬಾಲ್.ಎಮ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅನ್ವರ್ ಕೆ.ಎಚ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Be the first to comment on "ಅಡುಗೆ ಅನಿಲ ಬೆಲೆ ಏರಿಕೆ: ಎಸ್.ಡಿ.ಪಿ.ಐ.ನಿಂದ ಪ್ರತಿಭಟನೆ"