ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಅನುಷ್ಠಾನಗೊಳಿಸುವ ಕಾರ್ಯ ಇಂದು ನಡೆಯಬೇಕಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸೋಮವಾರ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಏರ್ಪಡಿಸಲಾದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ನಾರಾಯಣಗುರುಗಳನ್ನು ಪೂಜಿಸುವುದರೊಂದಿಗೆ ಅವರ ಆದರ್ಶಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡರೆ ಭಾರತ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದು ಶುಭ ಹಾರೈಸಿದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಈ ಸಂದರ್ಭ ಮಾತನಾಡಿ, ಹಿಂಸೆಯ ಭಾವ ನಮ್ಮಲ್ಲಿ ತೊಲಗಬೇಕಿದ್ದರೆ, ನಾರಾಯಣಗುರುಗಳ ತತ್ವಾಧ್ಯಯನ ಅಗತ್ಯ. ಸರ್ವಶ್ರೇಷ್ಠ ಚಿಂತನೆಗಳನ್ನು ನೀಡಿದ ಅದ್ಭುತ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಪ್ರತಿಪಾದನೆ ಅರಿವು ನಮಗಾಗಬೇಕು. ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ಅದ್ವೈತ ತತ್ವವನ್ನು ನಾರಾಯಣ ಗುರುಗಳು ಪಾಲನೆ ಮಾಡುತ್ತಿದ್ದರು. ಅಪನಂಬಿಕೆ. ಸಂಘರ್ಷಮಯದ ಇಂದಿನ ಕಾಲಘಟ್ಟದಲ್ಲಿ ನಾರಾಯಣ ಗುರುಗಳ ತತ್ವದ ಅಗತ್ಯವಿದೆ. ನಾರಾಯಣ ಗುರುಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಮಾನವೀಯ ಮೌಲ್ಯದ ಪ್ರತಿಪಾದಕರು ಎಂದರು. ನಾರಾಯಣ ಗುರುಗಳಂತಹ ಶ್ರೇಷ್ಡ ಸಂತರನ್ನು ಕೀಳಾಗಿ ಮಾತನಾಡಿರುವ ರಾಮಚಂದ್ರ ಗುಹಾ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭ ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ ಸಾರ್ವಕಾಲಿಕ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಮಾತನಾಡಿ ಆತ್ಮನಿರ್ಭರ ಪರಿಕಲ್ಪನೆಯನ್ನು ನಾರಾಯಣಗುರುಗಳು ಹೊಂದಿದ್ದರು ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಕರ್ಕೇರ ನಾರಾಯಣಗುರುಗಳ ಜೀವನಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಆನಂದ ಶಂಭೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಚ್ಚೇಂದ್ರ ಸಾಲಿಯಾನ್ ವಂದಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ ಪಾಲನೆ ಇಂದಿನ ಅಗತ್ಯ: ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್"