ಬಂಟ್ವಾಳ ತಾಲೂಕಿನಾದ್ಯಂತ ವ್ಯಾಪಕ ಹಾನಿ
ಬಂಟ್ವಾಳ: ಭಾನುವಾರ ಸುರಿದ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ಮನೆ, ತೋಟಗಳಿಗೆ ಹಾನಿಯಾಗಿದ್ದರೆ, ಕೆಲವೆಡೆ ಗುಡ್ಡ ಜರಿದಿದೆ. ಇನ್ನು ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾದರೆ, ರಸ್ತೆ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಸಂಚಾರ ದುಸ್ತರವಾಗಿದೆ.
ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ನಗ್ರಿ ಎಂಬಲ್ಲಿ ಗುಡ್ಡ ಕುಸಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕೂಸಪ್ಪ ನಾಯ್ಕ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಅವರು ಕುಟುಂಬ ಸಮೇತ ನಾವೂರು ಗ್ರಾಮದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ನೇಮಕ್ಕು ಅವರ ವಾಸದ ಮನೆಯ ಹಿಂಬದಿಯಲ್ಲಿ ಬರೆ ಬಿದ್ದಿರುತ್ತದೆ, ಅಬ್ದುಲ್ ಖಾದ್ರಿ ರವರ ಮನೆಯ ಕಾಂಪೌಂಡ್ ಕುಸಿದು ಬಿದ್ದಿದೆ. ಗುಂಡಿಮಜಲು ಎಂಬಲ್ಲಿ ಚೆನ್ನಪ್ಪ ಪೂಜಾರಿ ಮನೆಯ ಹಿಂಬಾಗದ ತೊಡಿನ ತಡೆಗೋಡೆ ಕುಸಿದು ಬಿದ್ದಿದೆ. ಸಜಿಪಮುನ್ನೂರು ಗ್ರಾಮದ ಅಮೀನಮ್ಮ ಎಂಬವರ ಮನೆಯ ಒಂದು ಭಾಗದ ಮಣ್ಣಿನ ಗೋಡೆ ಕುಸಿದುಬಿದ್ದಿದೆ.
ಭಾನುವಾರ ಸುರಿದ ಭಾರಿ ಮಳೆಗೆ ಬಿ.ಸಿ.ರೋಡ್ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳಗಿನವಗ್ಗ, ಆಲಂಪುರಿ ಕ್ರಾಸ್ ಬಳಿ ರಸ್ತೆ ಬದಿ ಗುಡ್ಡ ಜರಿದು ಸುಮಾರು 50ಕ್ಕೂ ಅಧಿಕ ಅಡಕೆ ಮರಗಳು ಧರಾಶಾಹಿಯಾಗಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ರಸ್ತೆ ಬದಿಯ ಗುಡ್ಡವನ್ನು ಅಗೆದಿರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಈಗಾಗಲೇ ರಸ್ತೆ ಇನ್ನೊಂದು ಬದಿಯಲ್ಲಿದ್ದ ಮನೆಯನ್ನು ಹೆದ್ದಾರಿ ಕಾಮಗಾರಿ ವೇಳೆ ತೆರವುಗೊಳಿಸಿದ್ದು, ತೋಟದ ಭಾಗದ ಜಾಗದಲ್ಲಿದ್ದ ಬಂಡೆಯನ್ನು ಒಡೆದು ಹಾಕಲಾಗಿತ್ತು. ಬಂಟ್ವಾಳ ಕಸಬಾ ಗ್ರಾಮದ ಮುಗ್ದಲ್ ಗುಡ್ಡೆ ಎಂಬಲ್ಲಿ ಶಕುಂತಲಾ ರವರ ಮನೆ ಕುಸಿದು ಪೂರ್ಣ ಹಾನಿ ಆಗಿದೆ. ಬಂಟ್ವಾಳ ಕಸಬಾ ಗ್ರಾಮ ದ ಮಣಿ ಎಂಬಲ್ಲಿ ಬಾಲಕೃಷ್ಣ ಗೌಡ ಬಿನ್ ಸಂಜೀವ ಗೌಡ ಅವರ ಆವರಣ ಗೋಡೆ ಕುಸಿದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಿ.ಸಿ.ರೋಡ್ ಮೊಡಂಕಾಪು ದೀಪಿಕಾ ಹೈಸ್ಕೂಲು ಕಂಪೌಂಡ್ ಮಳೆಗೆ ಕುಸಿದಿದೆ.ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ನಿವಾಸಿ ಸುನೀಲ್ ಪಾಯಸ್ ಅವರಿಗೆ ಸೇರಿದ ಕೃಷಿ ತೋಟದಲ್ಲಿದ್ದ ಅಡಿಕೆ ಮರಗಳು ಗುಡ್ಡ ಸಹಿತ ಪಕ್ಕದ ಮನೆಯಂಗಳಕ್ಕೆ ಬಿದ್ದಿದೆ. ಗುಡ್ಡದ ಪಕ್ಕದಲ್ಲಿದ್ದ ಸುಮಾರು 100 ಕ್ಕಿಂತಲೂ ಅಧಿಕ ಅಡಿಕೆ ಮರಗಳು ನೆಲಸಮವಾಗಿದೆ.
Be the first to comment on "ನಿಲ್ಲದ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ"