ಬಂಟ್ವಾಳ: ದೇಶದಲ್ಲಿ ತುರ್ತುಪರಿಸ್ಥಿತಿ ಸಂದರ್ಭ ಹೋರಾಡಿದ ಬಂಟ್ವಾಳ ತಾಲೂಕಿನವರನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಸನ್ಮಾನಿಸುವ ಹಾಗೂ ತುರ್ತುಪರಿಸ್ಥಿತಿ ಕರಾಳ ನೆನಪುಗಳು ಎಂಬ ವಿಚಾರದ ಕುರಿತು ಅನುಭವ ಹಂಚಿಕೊಳ್ಳುವ ಕಾರ್ಯಕ್ರಮ, ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡ್ ನ ರಂಗೋಲಿ ಹಾಲ್ ನಲ್ಲಿ ಶನಿವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ತುರ್ತುಪರಿಸ್ಥಿತಿ ಸಂದರ್ಭ ಅಂದು ಹೋರಾಡಿದ ಫಲವಾಗಿ ಇಂದು ದೇಶದಲ್ಲಿ ಸುಭದ್ರ ನಾಯಕತ್ವದಡಿ ಮುನ್ನಡೆಯುತ್ತಿದ್ದು, ಹೋರಾಟಗಾರರ ನಿಸ್ವಾರ್ಥ ಸೇವೆ ಅನನ್ಯ ಎಂದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ತುರ್ತುಪರಿಸ್ಥಿತಿಯ ಸಂದರ್ಭದ ಹೋರಾಟದ ಅನುಭವಗಳನ್ನು ಹಂಚಿಕೊಂಡರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ಈ ಸಂದರ್ಭ ಪ್ರಾಸ್ತಾವಿಕವಾಗಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿದರು. ವೇದಿಕೆಯಲ್ಲಿ ಪಕ್ಷ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ ಮತ್ತು ರವೀಶ ಶೆಟ್ಟಿ ಕರ್ಕಳ ಉಪಸ್ಥಿತರಿದ್ದು, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಪ್ರಮುಖರು ಹಾಗೂ ತುರ್ತುಪರಿಸ್ಥಿತಿ ಸಂದರ್ಭ ಹೋರಾಟ ನಡೆಸಿದ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಬಂಟ್ವಾಳ ಬಿಜೆಪಿ ವತಿಯಿಂದ ಸನ್ಮಾನ"