ಪಡಿತರ ವಿತರಣೆಗೆ ನಮ್ಮೂರಿನದ್ದೇ ಕುಚ್ಚಿಲಕ್ಕಿಗೆ ಈ ಯೋಜನೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪಡಿತರಕ್ಕೆ ಸಂಬಂಧಿಸಿ ಸ್ಥಳೀಯ ಅಕ್ಕಿಯನ್ನೇ ನೀಡುವ ಮಹತ್ವಾಂಕ್ಷೆಯ ಯೋಜನೆಯ ಸಾಕಾರಕ್ಕಾಗಿ ಬತ್ತದ ಕೃಷಿ ನಡೆಸುವ ಯೋಜನೆಯ ಮೊದಲ ಹೆಜ್ಜೆಯಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯ್ದ 75 ಎಕ್ರೆ ಹಡಿಲು ಭೂಮಿಯಲ್ಲಿ ಮೊದಲ ಹಂತದ ಭತ್ತದ ಬೆಳೆ ಮಾಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಬಂಟ್ವಾಳದಲ್ಲಿ ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲೆ, ತಾಲೂಕಿನ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯನ್ನು ನಡೆಸಿದ ನಾಯಕರು, ಹಡಿಲು ಬಿದ್ದ ಭತ್ತ ಕೃಷಿ ಭೂಮಿಯನ್ನು ಹದಮಾಡಿ ನೇಜಿ ನೆಡುವ ಕಾರ್ಯಕ್ಕೆ ಸಕಲ ಸಿದ್ದತೆ ಮಾಡಲು ಯೋಜನೆ ರೂಪಿಸಿದರು. ಬಂಟ್ಚಾಳ ತಾಲೂಕಿನಲ್ಲಿ ಒಟ್ಟು 400 ಎಕರೆ ಭತ್ತ ಕೃಷಿ ಭೂಮಿ ಹಡಿಲು ಬಿದ್ದಿದ್ದು ಅದರಲ್ಲಿ 160 ಎಕರೆ ಕೃಷಿಗೆ ಯೊಗ್ಯವಾಗಿದ್ದು ಈ ಬಾರಿ 75 ಎಕರೆಯಲ್ಲಿ ಭತ್ತ ಕೃಷಿ ಮಾಡಲು ಯೋಜನೆಗೆ ಸಿದ್ದ ಮಾಡಲು ಸಚಿವ ಕೋಟ ಈ ಸಂದರ್ಭ ಸೂಚಿಸಿದರು. ಆರಂಭಿಕ ಹಂತದಲ್ಲಿ ನರ್ಸರಿ ಕ್ರಮದ ಮೂಲಕ ಭತ್ತ ಕೃಷಿ ಚಟುವಟಿಕೆ ಮಾಡಲು ಶಾಸಕ ರಾಜೇಶ್ ನಾಯ್ಕ್ ಅವರ ನೇತ್ರತ್ವದಲ್ಲಿ ಸಿದ್ದತೆ ನಡೆಸಲಾಗಿದೆ. ಜಯ, ಎಮ್ ಒ.4, ಜ್ಯೋತಿ ಸೇರಿ ಒಟ್ಟು ನಾಲ್ಕು ತಳಿಗಳನ್ನು ಉಪಯೋಗ ಮಾಡಿಕೊಂಡು ಕೃಷಿ ಮಾಡಲಿದ್ದೇವೆ ಎಂದರು. ಬಂಟ್ವಾಳ ಶಾಸಕರು ಕೃಷಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿಕೊಂಡದ್ದಲ್ಲದೆ ಅವರ ಕ್ಷೇತ್ರದಲ್ಲಿ ಪ್ರಥಮವಾಗಿ ಹಡಿಲು ಬಿದ್ದ ಭತ್ತ ಕೃಷಿಮಾಡಲು ಅವರು ಮುಂದಾಗಿದ್ದಾರೆ ಹಾಗಾಗಿ ಅವರಿಗೆ ಸರಕಾರದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಗುಣಮಟ್ಟದ ಕೆಂಪು ಕುಚಲಕ್ಕಿಯನ್ನು ನವೆಂಬರ್ ತಿಂಗಳಲ್ಲಿ ಜಿಲ್ಲೆಯ ರೇಷನ್ ಕಾರ್ಡುದಾರರಿಗೆ ನೀಡುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ಕೃಷಿ ಚಟುವಟಿಕೆಗಳಿಗೆ ಸುಲಭ ಸಾಧ್ಯ ವಾಗುವ ನಿಟ್ಟಿನಲ್ಲಿ ಒಂದೇ ಕಡೆಗಳಲ್ಲಿ ಹಡಿಲು ಬಿದ್ದ ಜಮೀನುಗಳನ್ನು ಗುರುತಿಸಿ ಆರಂಭದಲ್ಲಿ ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಅಮ್ಟಾಡಿ, ಪಾಣೆಮಂಗಳೂರು, ಶಂಭೂರು, ಕಾವಳಮುಡೂರು ಕಡೆಗಳಲ್ಲಿ ಭೂಮಿ ಗುರುತಿಸಲಾಗಿದ್ದು, ಉತ್ತಮ ಸಾವಯವ ಕೃಷಿಯನ್ನು ನಡೆಸಲಾಗುತ್ತದೆ ಎಂದು ರಾಜೇಶ್ ನಾಯ್ಕ್ ಈ ಸಂದರ್ಭ ಹೇಳಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್.ಆರ್. ತಾಪಂ ಇಒ ರಾಜಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಸೀತಾ, ಉಪ ಕೃಷಿ ನಿರ್ದೇಶಕ ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಚೆನ್ನಕೇಶವ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ತಾಲೂಕು ಕೃಷಿ ಅಧಿಕಾರಿ ನಂದನ್ ಶೆಣೈ, ಕಂದಾಯ ಇಲಾಖೆ ನಿರೀಕ್ಷಕ ರಾಮ ಕಾಟಿಪಳ್ಳ, ಕೃಷಿ ಇಲಾಖೆಯ ಎಸ್.ಕೆ.ಸರಿಕ್ಕರ್, ಶೃತಿ ಬಿ.ಎಂ, ಹಣಮಂತ ಕಾಳಗಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ತಾಲೂಕಿನ 75 ಎಕ್ರೆ ಹಡಿಲು ಭೂಮಿಯಲ್ಲಿ ಮೊದಲ ಹಂತದ ಭತ್ತದ ಬೆಳೆ: ಸಚಿವ ಕೋಟ, ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಸಭೆಯಲ್ಲಿ ನಿರ್ಧಾರ"