ಕೋವಿಡ್ 3 ನೇ ಅಲೆಯಲ್ಲಿ ತಜ್ಞರ ಅಭಿಪ್ರಾಯದಂತೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಉಂಟಾಗುವ ಸಾಧ್ಯತೆಗಳಿವೆ ಇದರ ನಿಯಂತ್ರಣ ಹಾಗೂ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ 3 ನೇ ಅಲೆಯ ನಿಯಂತ್ರಣ ಹಾಗೂ ಮಕ್ಕಳ ವಿಶೇಷ ತಜ್ಞ ವೈದ್ಯರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಮ್ಮೆಲೆ ಎಲ್ಲಾ ಮಕ್ಕಳಿಗೆ ಸೋಂಕು ಹರಡಿದ್ದಲ್ಲಿ ಅವರುಗಳಿಗೆ ಶುಶ್ರೂಷೆ ನೀಡುವುದು ಕಷ್ಟಸಾಧ್ಯವಾಗುವ ಹಿನ್ನೆಲೆ ಯಾವುದೇ ರೋಗ ಬಂದು ಚಿಕಿತ್ಸೆ ನೀಡುವ ಬದಲಿಗೆ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸೋಂಕು ಹರಡದಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಒಂದೊಮ್ಮೆ ತಜ್ಞರ ಅಭಿಪ್ರಾಯದಂತೆ ಮಕ್ಕಳು ಹೆಚ್ಚು ಸೋಂಕಿತರಾಗಿ ಭಾದಿಸಿದ್ದಲ್ಲಿ ಅವರುಗಳಿಗೆ ಅಗತ್ಯವಿರುವ ಚಿಕಿತ್ಸೆಗಳನ್ನು ನೀಡಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಅಗತ್ಯ ಮೂಲಭೂತ ಸೌಕರ್ಯಗಳಾದ ಐ.ಸಿ.ಯು ಬೆಡ್‍ಗಳು, ವೆಂಟಿಲೇಟರ್‍ಗಳು, ಹೆಚ್.ಡಿ.ಯು ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳುವುದರೊಂದಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದರು.
ಮೂರನೇ ಅಲೆಯ ಚಿಕಿತ್ಸೆಗೆ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾಪ್ ನರ್ಸ್‍ಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್ ಕಾರ್ಯಪಡೆಗಳು ವ್ಯವಸ್ಥಿತ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
ಈಗಾಗಲೇ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಬಗ್ಗೆ ಪ್ರಾಯೋಗಿಕಕಾರ್ಯಚಾಲ್ತಿಯಲ್ಲಿದ್ದು, ಇದುಯಶಸ್ಸುಕಂಡಲ್ಲಿ ಮುಂದಿನ ದಿನಗಳಲ್ಲಿ 18 ವರ್ಷದೊಳಗಿನ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರೆಂಟ್‍ಲೈನ್ ವರ್ಕರ್ಸ್‍ಗಳಾಗಿ ಕಾರ್ಯನಿರ್ವಹಿಸುವ ಮಕ್ಕಳ ಪೋಷಕರು ಕೊರೋನಾ ನಿಯಮಗಳನ್ನು ಚಾಚುತಪ್ಪದೇ ಪಾಲಿಸುವುದರೊಂದಿಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.
ಕೊರೊನಾ ಸೋಂಕಿತ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆಯಾಯ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿಯೇ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ಮುಂಜಾಗೃತಾ ಕ್ರಮವಾಗಿ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರುಗಳಾದ ವೇದವ್ಯಾಸಕಾಮತ್, ಭರತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಿಶೋರ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕೋವಿಡ್ 3ನೇ ಅಲೆ: ಸಂಭ್ಯಾವ್ಯ ಅಪಾಯ ಎದುರಿಸಲು ಸಚಿವ ಕೋಟ ನೇತೃತ್ವದಲ್ಲಿ ತಜ್ಞರ ಸಭೆ"