ಈ ಕುರಿತು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್. ಅವರ ಅಭಿಪ್ರಾಯ ಹೀಗಿದೆ.
ಮೇ.1ರಂದು ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಕೋವಿಡ್ ನಿಯಂತ್ರಣ ಕುರಿತ ಸಭೆ ನಡೆದಿದ್ದ ಸಂದರ್ಭ ಬಂಟ್ವಾಳ ತಾಲೂಕಿನಲ್ಲಿ 542 ಸಕ್ರಿಯ ಪ್ರಕರಣಗಳಿರುವ ಕುರಿತು ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದರು. ನಾಲ್ಕೇ ದಿನಗಳಲ್ಲಿ ತಾಲೂಕಿನಲ್ಲಿ 542ರಿಂದ 988ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಜಿಗಿಯಿತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಾಡಳಿತ ಪರಿಸ್ಥಿತಿಯನ್ನು ನಿಭಾಯಿಸಲು ಹೇಗೆ ಸಜ್ಜಾಗಿದೆ? ಈ ಕುರಿತು ತಹಸೀಲ್ದಾರ್ ರಶ್ಮಿ ಎಸ್.ಆರ್. ಮಾತನಾಡಿದರು.
ಸಂಭಾವ್ಯ ಯಾವುದೇ ಕಠಿಣ ಪರಿಸ್ಥಿತಿ ಎದುರಿಸಲು ತಾಲೂಕಾಡಳಿತ ಸಿದ್ಧವಾಗಿದೆ ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಾವಶ್ಯಕ ಸಂಚರಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ತಾಲೂಕಾಡಳಿತ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಕಲ ವ್ಯವಸ್ಥೆಯನ್ನು ಮಾಡಿದ್ದು, ಜನರ ಸಹಕಾರ ಅತಿ ಮುಖ್ಯ ತಾಲೂಕಾಡಳಿತ ವತಿಯಿಂದ ಕೋವಿಡ್ ತಡೆಗಟ್ಟಲು ಕಠಿಣವಾದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಶ್ರಮಿಸಲಾಗುತ್ತಿದ್ದು, 13 ಫ್ಲೈಯಿಂಗ್ ಸ್ಕ್ವಾಡ್ ಗಳು ತಾಲೂಕಿನಾದ್ಯಂತ ಸಂಚರಿಸಿ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳುತ್ತಿವೆ. ಆದಾಗ್ಯೂ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುತ್ತಿರುವುದು ಕಂಡುಬಂದಿದ್ದು, ಅವರಿಗೆ ದಂಡ ವಿಧಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ, ತಾಲೂಕಿನಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ, ಆಮ್ಲಜನಕ ಬೆಡ್ ವ್ಯವಸ್ಥೆಗಳಾಗಿದೆ. ಜಿಲ್ಲಾಡಳಿತ ವತಿಯಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.ಕೋವಿಡ್ ಸಂಖ್ಯೆ ಹೆಚ್ಚಳವಾಗದಂತೆ ಜನರೇ ಎಚ್ಚರವಹಿಸಬೇಕು. ಮನೆಯಿಂದ ಹೊರಗೆ ಬರಬಾರದು. ಒಂದು ವಸ್ತು ತೆಗೆದುಕೊಳ್ಳಲು ಮನೆಯವರೆಲ್ಲರೂ ಹೊರಗೆ ಬರುವುದು, ಅನಗತ್ಯವಾಗಿ ತಿರುಗಾಡುವುದೂ ಸಲ್ಲದು. ಕೋವಿಡ್ ಚೈನ್ ಬ್ರೇಕ್ ಮಾಡಲು ನಾಗರಿಕರ ಸಹಕಾರ ಅಗತ್ಯ. ಭಯ ಬೇಡ, ಎಚ್ಚರ ಇರಲಿ ಎಂದು ತಹಸೀಲ್ದಾರ್ ಹೇಳಿದ್ದಾರೆ.
Be the first to comment on "ಕೊರೊನಾ ಎರಡನೇ ಅಲೆ: ಬಂಟ್ವಾಳ ತಾಲೂಕಾಡಳಿತ ಹೇಗೆ ನಿಭಾಯಿಸುತ್ತಿದೆ?"