ಪರಿಶಿಷ್ಟ ಜಾತಿಯವರ ಸ್ವಾಭಿಮಾನಕ್ಕೆ ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತಾ ಮಂಡಲ್ ಖಾನ್ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗಳಿಗೆ ಬಂಟ್ವಾಳ ತಹಸೀಲ್ದಾರ್ ಮೂಲಕ ಶನಿವಾರ ಮನವಿ ಸಲ್ಲಿಸಲಾಗಿದೆ.
ಬಿಜೆಪಿ ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಂಗಳೂರು, ಉಡುಪಿ, ಹಾಸನ ಸಹಪ್ರಭಾರಿಗಳಾದ ದಿನೇಶ್ ಅಮ್ಟೂರು ಉಪಸ್ಥಿತಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್ಸಿ ಮೋರ್ಚಾ ಅಧ್ಯಕ್ಷ ಕೇಶವ ದೈಪಲ ಉಪಸ್ಥಿತಿಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಮನವಿ ಸಲ್ಲಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಸಂದರ್ಭದಲ್ಲೇ ಪ.ಜಾತಿಯವರನ್ನು ಭಿಕ್ಷುಕರು ಎಂಬ ರೀತಿಯಲ್ಲಿ ಹೇಳಿಕೆ ಕೊಟ್ಟಿರುವುದು ದುರದೃಷ್ಟಕರ. ಸುಜಾತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು, ಉಪಾಧ್ಯಕ್ಷ ವಿಶ್ವನಾಥ್ ಚೆಂಡ್ತಿಮಾರ್, ಕಾರ್ಯದರ್ಶಿ ಹರೀಶ್ ನಾವೂರು ಹಾಗೂ ಪಕ್ಷದ ಪರಿಶಿಷ್ಟ ಜಾತಿಯ ಪ್ರಮುಖರು ಉಪಸ್ಥಿತರಿದ್ದರು.ಬಿಜೆಪಿ ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಂಗಳೂರು, ಉಡುಪಿ, ಹಾಸನ ಸಹಪ್ರಭಾರಿಗಳಾದ ದಿನೇಶ್ ಅಮ್ಟೂರ್ ಈ ಸಂದರ್ಭ ಮಾತನಾಡಿ ಭಾರತೀಯ ದಂಡ ಸಂಹಿತೆಯ ಕಾಯ್ದೆಗಳನ್ನು ಉಲ್ಲಂಘಿಸಿದ ತೃಣಮೂಲ ಕಾಂಗ್ರೆಸ್ ನಾಯಕಿ ಅವರ ಕೀಳು ಮಟ್ಟದ ಮನೋಸ್ಥಿತಿಯನ್ನು ಇದು ತೋರಿಸುತ್ತದೆ. ಪರಿಶಿಷ್ಟ ಜಾತಿಯ ಯಾವೊಬ್ಬ ವ್ಯಕ್ತಿಯು ಭಿಕ್ಷೆಯನ್ನು ದುಡಿಮೆಯಾಗಿಸಿಕೊಳ್ಳದೆ, ದುಡಿಯುವುದನ್ನು ಜೀವನವಾಗಿಸಿಕೊಂಡು ಬದುಕುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಟಿಎಂಸಿ ನಾಯಕಿ ನೀಡಿದ ಹೇಳಿಕೆ ಅಕ್ಷಮ್ಯ ಎಂದರು.
Be the first to comment on "ತೃಣಮೂಲ ಕಾಂಗ್ರೆಸ್ ನಾಯಕಿಯಿಂದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅಪಮಾನ ಆರೋಪ: ಬಿಜೆಪಿ ಎಸ್ಸಿ ಮೋರ್ಚಾದಿಂದ ಖಂಡನೆ, ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ"